ಬೆಂಗಳೂರು: ‘ಸ್ವಾಮಿ ವಿರೋಧ ಪಕ್ಷದ ನಾಯಕರೇ, ನಿಮ್ಮ ಟ್ವೀಟ್ ನಿಮ್ಮ ಪರಮ ಅಜ್ಞಾನದ ಫಲವೋ? ಅಥವಾ ವಿರೋಧ ಪಕ್ಷದ ನಾಯಕ ಅಸ್ತಿತ್ವದಲ್ಲಿದ್ದಾರೆ ಎಂದು ಜನರಿಗೆ ತಿಳಿಸಲು ಮಾಡುತ್ತಿರೋ? ಇದು ನಮ್ಮನ್ನೂ ಸೇರಿಸಿಕೊಂಡಂತೆ ರಾಜ್ಯದ ಜನಸಾಮಾನ್ಯರಿಗೂ ಅರ್ಥವಾಗದೆ ಇರುವ ಯಕ್ಷ ಪ್ರಶ್ನೆ’ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಿಎಂ, ‘ನೀವು ಸುಳ್ಳಿನ ಕೋಟೆಯನ್ನು ಎಷ್ಟೇ ದೊಡ್ಡದಾಗಿ ಕಟ್ಟಿದರೂ ಅದರ ಆಯುಷ್ಯ ಕಡಿಮೆ. ನಮ್ಮ ಸತ್ಯದ ಒಂದು ಏಟಿಗೆ ಅದು ಕುಸಿದುಬೀಳುತ್ತಲೇ ಇದೆ. ನೀವು ಮತ್ತೆ ಮತ್ತೆ ಸುಳ್ಳುಗಳನ್ನು ಹೇಳಿ ನಮ್ಮ ಕೈಗೆ ದೊಣ್ಣೆ ಕೊಟ್ಟು ಹೊಡೆಸಿಕೊಳ್ಳುತ್ತಲೇ ಇದ್ದೀರಿ. ಇದು ಮುಂದುವರಿಯಲಿ ಆಲ್ ದಿ ಬೆಸ್ಟ್’ ಎಂದಿದ್ದಾರೆ.
‘ಯುವಕರಿಗೆ ಅದರಲ್ಲಿಯೂ ರಾಜ್ಯದ ಯುವಕರಿಗೆ ನಿರುದ್ಯೋಗ ಭಾಗ್ಯ ಕಲ್ಪಿಸಲು ಕಾರಣವಾದ ಕೇಂದ್ರ ಸರ್ಕಾರದ ಈ ಯೋಜನೆಯ ಬಗೆಗಿನ ತಮ್ಮ ನೋವು, ದುಃಖ ಮತ್ತು ಸಂಕಟಗಳಿಗೆ ಉತ್ತರ ಕಂಡುಕೊಳ್ಳುವ ತವಕ ನಿಮ್ಮಲ್ಲಿದ್ದರೆ ದಯವಿಟ್ಟು ನಿಮ್ಮ ಪೂಜ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಕೇಳಿ ಉತ್ತರ ಪಡೆಯಿರಿ, ಅಸಂಬದ್ಧ ಟ್ವೀಟ್ಗಳ ಮೂಲಕ ನಿಮ್ಮ ಅಜ್ಞಾನ ಪ್ರದರ್ಶಿಸಬೇಡಿ.’
‘ಸಾರಿಗೆ ಸಂಸ್ಥೆಗಳಲ್ಲಿ ಕಳೆದ 5 ವರ್ಷಗಳಲ್ಲಿ ಹೊಸ ಬಸ್ಸುಗಳ ಸೇರ್ಪಡೆ ಮಾಡದೇ, ಡಕೋಟ ಬಸ್ಸುಗಳನ್ನು ದಯಪಾಲಿಸಿರುವ ನೀವು ಮಾತನಾಡುವ ಪರಿಗೆ ವಿಷಾದವಲ್ಲದೇ ಮತ್ತೇನು ವ್ಯಕ್ತಪಡಿಸಲು ಸಾಧ್ಯ? ತಮ್ಮ ಬೇಜವಾಬ್ದಾರಿ, ಆಧಾರರಹಿತ, ತಪ್ಪು ಹೇಳಿಕೆಗಳಿಗೆ ಸಂತಾಪ ಸೂಚಿಸುತ್ತಾ ನಿಮಗೆ ನೀವು ನಂಬಿರುವ ದೇವರು ಸತ್ಯ ಹೇಳುವ ಸದ್ಬುದ್ಧಿ ಕರುಣಿಸಲಿ’ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.