ಬೆಂಗಳೂರು, ಮೇ 31: ಅಶ್ಲೀಲ ವಿಡಿಯೋ, ಅತ್ಯಾಚಾರ ಹಾಗೂ ಕಿಡ್ನ್ಯಾಪ್ ಪ್ರಕರಣಗಳನ್ನು ಎದುರಿಸುತ್ತಿರುವ ಜೆಡಿಎಸ್ ನಾಯಕರಾದ ಹೆಚ್ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಹಾಗೂ ಪುತ್ರ ಪ್ರಜ್ವಲ್ ರೇವಣ್ಣಗೆ ಇಂದು ಮಹತ್ವದ ದಿನ. ಮೂವರಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ಇಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಹಾಗೂ ಹೈಕೋರ್ಟ್ನಲ್ಲಿ ನಡೆಯಲಿದೆ.
ಒಂದೆಡೆ ಅತ್ಯಾಚಾರ ಕೇಸ್ನಲ್ಲಿ ಬಂಧಿತನಾಗಿರುವ ಪ್ರಜ್ವಲ್, ಮತ್ತೊಂದೆಡೆ ಬಂಧನದ ಭೀತಿಯಲ್ಲಿರೋ ಭವಾನಿ, ಮಗದೊಂದೆಡೆ ಸಿಕ್ಕಿರುವ ಜಾಮೀನು ರದ್ದುಗೊಳ್ಳುತ್ತದೆಯಾ ಎಂಬ ಆತಂಕದಲ್ಲಿರುವ ಹೆಚ್ಡಿ ರೇವಣ್ಣ. ಹೀಗೆ ರೇವಣ್ಣ ಕುಟುಂಬದ ಮೂವರು ಪಾಲಿಗೆ ಇಂದು ತೀರಾ ಆತಂಕದ ದಿನ. ಇವತ್ತಿನ ಕೋರ್ಟ್ ನೀಡಬಹುದಾದ ಆದೇಶ ಇವರ ಭವಿಷ್ಯ ನಿರ್ಧರಿಸಲಿರುವುದೇ ಇದಕ್ಕೆ ಕಾರಣ.
ಮೈಸೂರಿನ ಕೆಆರ್ ನಗರದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಎಸ್ಐಟಿ ಭವಾನಿ ರೇವಣ್ಣರನ್ನ ಬಂಧಿಸಿಯೇ ವಿಚಾರಣೆಗೆ ಒಳಪಡಿಸಬೇಕೆಂದು ಹೇಳುತ್ತಿದೆ. ಭವಾನಿ ನಿರೀಕ್ಷಣಾ ಜಾಮೀನು ಅರ್ಜಿಯ ಆದೇಶ ಇಂದು ಹೊರಬೀಳಲಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ನೀಡುವ ಆದೇಶ ಭವಾನಿ ಭವಿಷ್ಯ ನಿರ್ಧರಿಸಲಿದೆ. ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರಗೊಂಡ್ರೆ ಎಸ್ಐಟಿಯಿಂದ ಭವಾನಿ ಬಂಧನಕ್ಕೊಳಗಾಗೋ ಸಾಧ್ಯತೆ ಹೆಚ್ಚು. ನಿರೀಕ್ಷಣಾ ಜಾಮೀನು ಸಿಕ್ಕರೆ ಬಂಧನದ ಭೀತಿಯಿಂದ ಭವಾನಿಗೆ ಮುಕ್ತಿ ಸಿಗಬಹುದು.