ರಾಯಚೂರು, ಮೇ.29: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಆರಂಭಿಕ ಬಾಲ್ಯದ ಆರೈಕೆ ಶಿಕ್ಷಣ (ಇಸಿಸಿಇ) ಆರಂಭಕ್ಕೆ ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಸರ್ಕಾರದ ಈ ಹೊಸ ಆದೇಶದಿಂದ ಅಂಗನವಾಡಿ ಕೇಂದ್ರಗಳು ಬಂದ್ ಆಗುತ್ತವಾ ಎಂಬ ಆತಂಕ ಹುಟ್ಟುಕೊಂಡಿದೆ.
ಇನ್ನು ಸರ್ಕಾರದ ಹೊಸ ಆದೇಶ ವಾಪಸ್ ಪಡೆಯುವಂತೆ ಒತ್ತಾಯಿಸಿ ಜೂನ್ 3ರಂದು ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳ ಅಂಗನವಾಡಿ ನೌಕರರು ಅಂಗನವಾಡಿ ಬಂದ್ ಮಾಡಿ ಕಲಬುರಗಿ ಚಲೊ ಅಭಿಯಾನ ನಡೆಸಲು ಮುಂದಾಗಿದ್ದಾರೆ.
ಎಲ್ಕೆಜಿ, ಯುಕೆಜಿ ತರಗತಿಗಳನ್ನ ಸರ್ಕಾರಿ ಶಾಲೆಗಳಲ್ಲಿ ಆರಂಭಿಸಿರೊ ಹೊಸ ಯೋಜನೆಗೆ ಅಂಗನವಾಡಿ ಕಾರ್ಯಕರ್ತೆಯರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಹೊಸ ಆದೇಶಕ್ಕೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಬೀದಿಗೆ ಬೀಳೋ ಸ್ಥಿತಿ ಉಂಟಾಗಲಿದೆ.
ರಾಜ್ಯದ 1 ಲಕ್ಷ 30 ಸಾವಿರ ಜನ ಅಂಗನವಾಡಿ ಕಾರ್ಯಕರ್ತೆಯರ ಉದ್ಯೋಗ ಕೈ ತಪ್ಪೋ ಭೀತಿ ಇದೆ. ಹೀಗಾಗಿ ರಾಯಚೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹೋರಾಟಕ್ಕೆ ಸಜ್ಜಾಗಿದ್ದಾರೆ. ಇದೇ ಜೂನ್ 3 ರಂದು ಕಲಬುರ್ಗಿಯಲ್ಲಿ ಕಲ್ಯಾಣ ಕರ್ನಾಟಕ ಎಂಟು ಜಿಲ್ಲೆಗಳಿಂದ ಹೋರಾಟ ನಡೆಸಲು ತಯಾರಿ ನಡೆಯುತ್ತಿದೆ.