ಬಾಗಲಕೋಟೆ, ಮೇ 29: ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಶಿಕ್ಷಾರ್ಹ ಅಪರಾಧವಾಗಿದೆ. ಆದರೂ ಕೂಡ ಇತ್ತೀಚಿಗೆ ಬೆಂಗಳೂರು ಮತ್ತು ಮಂಡ್ಯದಲ್ಲಿ ಭ್ರೂಣ ಲಿಂಗ ಪತ್ತೆ ಹತ್ಯೆ ನಡೆದಿತ್ತು.
ಈ ಎರಡು ಜಿಲ್ಲೆಗಳಲ್ಲಿನ ಪ್ರಕರಣಗಳು ಮಾಸುವ ಮುನ್ನವೇ ಬಾಗಲಕೋಟೆ ಜಿಲೆಯಲ್ಲಿ ಇಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಹೌದು, ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದ ಮನೆಯೊಂದರಲ್ಲಿ ಗರ್ಭಪಾತ ಮಾಡುತ್ತಿರುವುದು ಬಯಲಾಗಿದ್ದು, ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ಸೋನಾಲಿ (33) ಎಂಬುವರು ಮಹಾರಾಷ್ಟ್ರದ ಮಿರಜ್‌ನ ಖಾಸಗಿ ಆಸ್ಪತ್ರೆಯಲ್ಲಿ ಭ್ರೂಣ ಲಿಂಗ ಪತ್ತೆಗೆ ಒಳಗಾಗಿದ್ದಾರೆ. ಈ ವೇಳೆ ಹೊಟ್ಟೆಯಲ್ಲಿ ಹೆಣ್ಣು ಮಗು ಇರುವುದು ಗೊತ್ತಾಗಿದೆ. ಸೋನಾಲಿ ದಂಪತಿಗೆ ಈಗಾಗಲೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ.
ಮೂರನೆಯದ್ದೂ ಹೆಣ್ಣು ಮಗು ಅಂತ ಗೊತ್ತಾಗುತ್ತಿದ್ದಂತೆ, ಸೋನಾಲಿ ಕುಟುಂಬಸ್ಥರು ಗರ್ಭಪಾತ ಮಾಡಿಸಲು ನಿರ್ಧರಿಸಿದ್ದಾರೆ. ಆಗ, ಮಹಾಲಿಂಗಪುರದ ಮನೆಯೊಂದರಲ್ಲಿ ಗರ್ಭಪಾತ ಮಾಡುತ್ತಿದ್ದ ಕವಿತಾ ಎಂಬುವರನ್ನು ಸಂಪರ್ಕಿಸಿ, ಸೋನಾಲಿ ಅವರನ್ನು ಕರೆದುಕೊಂಡು ಸೋಮವಾರ (ಮೇ 27)ರ ಬೆಳಗ್ಗೆ ಬರುತ್ತಾರೆ.
ಇಲ್ಲಿ ಗರ್ಭಪಾತ ಬಳಿಕ ರಕ್ತಸ್ರಾವವಾಗಿ ಸೋನಾಲಿ ಅವರು ಪ್ರಜ್ಞಾ ಹೀನರಾಗುತ್ತಾರೆ. ಆಗ ಕವಿತಾ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳುತ್ತಾರೆ. ಕಾರಿನಲ್ಲಿ ಕರೆದುಕೊಂಡು ಹೋಗುವಾಗ, ಮಾರ್ಗಮಧ್ಯೆ ಸೋನಾಲಿ ನಿಧನರಾಗಿದ್ದಾರೆ.