ಬೆಂಗಳೂರು: ಮುಂಬರುವ ಚುನಾವಣೆಗಳನ್ನುನ್ನು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿಯೇ ಎದುರಿಸಲಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಜಿ ಸಿ ಚಂದ್ರಶೇಖರ್ ಸೋಮವಾರ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಯಾವುದೇ ಬದಲಾವಣೆಗಿದು ಕಾಲವಲ್ಲ. ಮುಂಬರುವ ಬಿಬಿಎಂಪಿ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಡಿಕೆ.ಶಿವಕುಮಾರ್ ಅವರ ನೇತೃತ್ವದಲ್ಲಿಯೇ ಪಕ್ಷ ಎದುರಿಸಲಿದೆ. ಚುನಾವಣೆ ಕುರಿತು ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರೊಂದಿಗೆ ಚರ್ಚಿಸಲಿದೆ. ಶಿವಕುಮಾರ್ ನೇತೃತ್ವದಲ್ಲಿಯೇ ಚುನಾವಣೆ ನಡೆಯಲಿದೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಸಚಿವ ಸ್ಥಾನ ತೊರೆಯಲು ಸಿದ್ಧ ಎಂಬ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂದು ತಿರುಗೇಟು ನೀಡಿದರು.
ಕೆಪಿಸಿಸಿ ಅಧ್ಯಕ್ಷರಾಗುವ ಬಯಕೆ ಹಲವರಿಗಿದೆ. ಆದರೆ, ಈ ವಿಚಾರವನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕೇ ವಿನಃ ಸಾರ್ವಜನಿಕವಾಗಿ ಮಾತನಾಡಿ ಪಕ್ಷಕ್ಕೆ ಮುಜುಗರ ಉಂಟು ಮಾಡಬಾರದು ಎಂದು ಸಲಹೆ ನೀಡಿದರು.