ಪೋರ್ಟ್ ಮೋರೆಸ್ಬಿ: ಪಪುವಾ ನ್ಯೂಗಿನಿಯಲ್ಲಿ ಭಾರೀ ಪ್ರಮಾಣದ ಭೂಕುಸಿತ ಸಂಭವಿಸಿ, 2 ಸಾವಿರಕ್ಕೂ ಅಧಿಕ ಮಂದಿ ಭೂಸಮಾಧಿಯಾಗಿದ್ದಾರೆ ಎಂದು ಪಪುವಾ ನ್ಯೂಗಿನಿಯಾ ರಾಷ್ಟ್ರೀಯ ವಿಪತ್ತು ಕೇಂದ್ರ ವಿಶ್ವಸಂಸ್ಥೆಗೆ ಮಾಹಿತಿ ನೀಡಿದೆ.
ದ್ವೀಪರಾಷ್ಟ್ರದ ಉತ್ತರದಲ್ಲಿರುವ ಎಂಗಾ ಪ್ರಾಂತದ ಯಂಬಾಲಿ ಹಳ್ಳಿಯ ಬೆಟ್ಟಪ್ರದೇಶಗಳಲ್ಲಿ ಶುಕ್ರವಾರ ಸ್ಥಳೀಯ ಕಾಲಮಾನ ಬೆಳಿಗ್ಗೆ 3 ಗಂಟೆಗೆ ಭೂಕುಸಿತ ಸಂಭವಿಸಿದ್ದು ಸುತ್ತಮುತ್ತಲಿನ ಹಲವು ಹಳ್ಳಿಗಳಲ್ಲೂ ಅಪಾರ ಸಾವು-ನೋವು, ನಾಶ ನಷ್ಟ ಸಂಭವಿಸಿದೆ.
ಶೋಧ ಮತ್ತು ರಕ್ಷಣಾ ತಂಡದ ಕಾರ್ಯಾಚರಣೆಯಲ್ಲಿ ಮಣ್ಣಿನಡಿ ಸಮಾಧಿಯಾಗಿದ್ದ ಹಲವು ದೇಹಗಳನ್ನು ಮೇಲೆತ್ತಲಾಗಿದೆ. ಸುಮಾರು 150 ಮನೆಗಳು ಮಣ್ಣಿನಡಿ ಹೂತುಹೋಗಿರುವುದಾಗಿ ಅಂದಾಜಿಸಲಾಗಿದೆ. ಹಲವೆಡೆ ಇನ್ನೂ ಕುಸಿತ ಮುಂದುವರಿದಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದ್ದು. ಸಾವು-ನೋವಿನ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆ ವಲಸೆ ಏಜೆನ್ಸಿ ಅಧಿಕಾರಿ ಸೆರ್ಹಾನ್ ಅಕ್ಟೋಪ್ರಾಕ್ ಮಾಹಿತಿ ನೀಡಿದ್ದಾರೆ.
ಇದೊಂದು ಅಸಾಮಾನ್ಯ ಪ್ರಾಕೃತಿಕ ದುರಂತವಾಗಿದ್ದು 1 ಸಾವಿರಕ್ಕೂ ಅಧಿಕ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಹಲವೆಡೆ ಕೃಷಿ ತೋಟಗಳು ರಾತ್ರಿ ಬೆಳಗಾಗುವುದರಲ್ಲಿ ಭೂಮಿಯ ಒಡಲನ್ನು ಸೇರಿದ್ದು ಅಪಾರ ನಷ್ಟ ಸಂಭವಿಸಿದೆ. ನೀರು ಪೂರೈಕೆ ವ್ಯವಸ್ಥೆಗೆ ಹಾನಿಯಾಗಿದ್ದು, ಹಲವೆಡೆ ಕುಡಿಯುವ ನೀರಿನ ಕೊರತೆ ಎದುರಾಗಿದೆ.