ಬೆಂಗಳೂರು: ಇತ್ತೀಚೆಗೆ ನಗರದ ಹೊರ ವಲಯದ ಫಾರ್ಮ್‌ಹೌಸ್‌ನಲ್ಲಿ ನಡೆದ ರೇವ್ ಪಾರ್ಟಿಗೆ ಸಂಬಂಧಿಸಿದಂತೆ ತೆಲುಗಿನ ಜನಪ್ರಿಯ ನಟಿ ಹೇಮಾ ಅವರು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಮಾದಕ ದ್ರವ್ಯ ನಿಗ್ರಹ ದಳದ ಮುಂದೆ ವಿಚಾರಣೆಗೆ ಹಾಜರಾಗಲು ಸಮಯ ಕೋರಿದ್ದಾರೆ.
ಅನಾರೋಗ್ಯದ ಕಾರಣ ನೀಡಿ ಹೇಮಾ ಅವರು ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಮುಂದೆ ವಿಚಾರಣೆಗೆ ಹಾಜರಾಗಲು ಏಳು ದಿನಗಳ ಕಾಲಾವಕಾಶ ಕೋರಿದ್ದಾರೆ ಎಂದು ಪೊಲೀಸ್ ಮೂಲಗಳು ಸೋಮವಾರ ತಿಳಿಸಿವೆ.
ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ನಟಿ ಹೇಮಾ ಸೇರಿದಂತೆ ಎಂಟು ಮಂದಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಉಳಿದವರು ಸೋಮವಾರ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ.
ಹೇಮಾ ಅವರಿಗೆ ಎರಡನೇ ಬಾರಿ ನೋಟಿಸ್ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ಜಿಎಂ ಫಾರ್ಮ್‌ಹೌಸ್‌ನಲ್ಲಿ ನಡೆದ ರೇವ್ ಪಾರ್ಟಿಯ ಮೇಲೆ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳ ದಾಳಿ ನಡೆಸಿ, ಸ್ಥಳದಿಂದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿತ್ತು.
ಪ್ರಕರಣದಲ್ಲಿ ತೆಲುಗು ನಟಿಯನ್ನು ರಕ್ಷಿಸುವಂತೆ ತೆಲಂಗಾಣ ಮತ್ತು ಆಂಧ್ರಪ್ರದೇಶದ ಪ್ರಭಾವಿಗಳಿಂದ ಒತ್ತಡ ಹೇರಲಾಗುತ್ತಿದೆ. ಬಂಧಿತ ವ್ಯಕ್ತಿಗಳು ಹೆಚ್ಚು ಸಂಪರ್ಕ ಹೊಂದಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ ಮತ್ತು ಪ್ರಕರಣದಲ್ಲಿ ಹೆಚ್ಚಿನ ತನಿಖೆಯು ಸಂಭವನೀಯ ಡ್ರಗ್ಸ್ ದಂಧೆಯನ್ನು ಬಯಲಿಗೆಳೆಯುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ಹೇಳಿವೆ.