ಬೆಂಗಳೂರು: ಪೊಲೀಸ್ ಠಾಣೆಗೇ ಬಂದು ಧಮ್ಕಿ ಹಾಕೋರನ್ನ ಸುಮ್ಮನೆ ಬಿಡಲು ಆಗುತ್ತಾ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ. ಸದಾಶಿವನಗರ ನಿವಾಸದ ಬಳಿ ಚನ್ನಗಿರಿ ಲಾಕ್ ಅಪ್ ಡೆತ್ ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಆ ವ್ಯಕ್ತಿ ಮೇಲೆ ದೂರು ಇತ್ತು. ಹಾಗಾಗಿ ಪೊಲೀಸರು ಅವರನ್ನು ವಿಚಾರಣೆಗೆ ಕರೆತಂದಿದ್ರು. ಕರೆದುಕೊಂಡು ಬಂದ ಏಳು ನಿಮಿಷದಲ್ಲಿ ಆರೋಗ್ಯದಲ್ಲಿ ಏನೋ ಆಗಿ ತೀರಿಕೊಂಡಿದ್ದಾರೆ. ಪೊಲೀಸರೇ ಹೊಡೆದು ಸಾಯಿಸಿದ್ದಾರೆ ಅಂತ ತಿಳಿದುಕೊಂಡು ಪ್ರತಿಭಟನೆ ಮಾಡಿದ್ದಾರೆ. ಪೊಲೀಸ್ ಠಾಣೆಗೆ ನುಗ್ಗುವ ಪ್ರಯತ್ನ ಮಾಡಿದ್ದಾರೆ ಎಂದು ವಿವರಿಸಿದರು.
ಪೊಲೀಸರು ಟಿಯರ್ ಗ್ಯಾಸ್ ಸಿಡಿಸಿದ್ದಾರೆ. ಪೋಸ್ಟ್ ಮಾರ್ಟಂನಲ್ಲಿ ಯಾಕೆ ಸಾವನ್ನಪ್ಪಿದ್ರು ಅಂತ ಗೊತ್ತಾಗುತ್ತೆ. ಸಹಜವಾಗಿ ಕಲ್ಲು ತೂರಾಟ ಆದಾಗ ಅಲ್ಲಿರೋ ಪೊಲೀಸರಿಗೂ ಗಾಯಗಳಾಗ್ತವೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಈ ಗುಂಪು ಘರ್ಷಣೆ, ರೌಡಿಸಂಗಳು ಯಾರನ್ನೂ ಹೇಳಿ ಕೇಳಿ ಮಾಡಲ್ಲ. ಇದ್ದಕ್ಕಿದ್ದ ಹಾಗೆ ಮಾಡ್ತಾರೆ. ಅಂಥ ಸಂದರ್ಭದಲ್ಲಿ ಅದನ್ನು ಹತ್ತಿಕ್ಕುವ ಕೆಲಸ ಮಾಡ್ತೇವೆ ಎಂದರು.
ಏನು ಬೇಕಾದರೂ ಮಾಡಬಹುದು ಅನ್ನೋರನ್ನ ನಾವು ಬಿಡಲ್ಲ. ಪೊಲೀಸ್ ಠಾಣೆಗೇ ಬಂದು ಪೊಲೀಸರ ತಲೆ ಕಡೆಯುತ್ತೇವೆ ಅನ್ನೋರನ್ನು ಬಿಡಕ್ಕಾಗುತ್ತಾ?. ಪೊಲೀಸರು ಅಂಥವರ ಮೇಲೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಮಾದರಿ ಗಲಾಟೆ ಮಾಡ್ತಾರೆಂಬ ಬಗ್ಗೆ ನನಗೂ ಕಿವಿಗೆ ಬಿತ್ತು. ಅಂಥವರ ವಿರುದ್ಧ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವರು ಎಚ್ಚರಿಕೆ ರವಾನಿಸಿದರು.