ಸಮಾಜ ಸುಧಾರಕರಲ್ಲಿ ಬುದ್ಧ ಅವರಂತಹ ಹಲವಾರು ಯುಗಪುರುಷರು ಜನ್ಮವೆತ್ತು ಅಸಮಾನತೆ, ಅನ್ಯಾಯ ಹಾಗೂ ಅಸಹನೆಯ ವಿರುದ್ಧ ಹೋರಾಟ ನಡೆಸಿದ್ದಾರೆ. ಇವರು ಲೋಕ ಕಲ್ಯಾಣಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಿಟ್ಟು ಅವಿರತವಾದ ಹೋರಾಟ ನಡೆಸಿ, ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಸಾಕ್ಷೀಕರಿಸಿದ್ದಾರೆ.ಸಾಮಾಜಿಕ ಅಸಮಾನತೆಯ ಕುರಿತು ಪ್ರತಿಭಟನಾತ್ಮಕ ನೆಲೆಯಲ್ಲಿ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿ ದಮನಿತ ತಳಸಮುದಾಯದ ಶೋಚನೀಯ ಬದುಕನ್ನು ಹಸನಗೊಳಿಸುವ ದಿಸೆಯಲ್ಲಿ ಶ್ರಮಿಸಿದ್ದಾರೆ.
ಆದರೆ ಇಂದಿನ ಸಮಾಜದಲ್ಲಿ ಕ್ರೌರ್ಯದ ಸ್ವರೂಪವು ಮಾತ್ರ ಪ್ರಬಲಗೊಳ್ಳುತ್ತಲೆ ಮುನ್ನೆಲೆಗೆ ಬರುತ್ತಿದೇ ಎಂಬುದೇ ಅತ್ಯಂತ ನೋವಿನ ಸಂಗತಿ. ಈ ಸಂದರ್ಭಗಳಲ್ಲಿ ಅನ್ಯಾಯದ ಒತ್ತಡವನ್ನು ಪ್ರತಿರೋಧಿಸುವ ವಿಭಿನ್ನ ಆಯಾಮಗಳಲ್ಲಿ ಇಲ್ಲಿ ಎದುರಾಗುತ್ತಲಿವೆ.
ಈ ಹಿನ್ನೆಲೆಯಲ್ಲಿ ಉಳ್ಳವರ ಸಿರಿತನದ ದಾಹಕ್ಕೆ ಬಲಿಯಾಗುವ ಶೋಷಿತರ ಸ್ಥಿತಿಯನ್ನು ಕಂಡು ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸುವ ಜನಸಾಮಾನ್ಯರ ಸಂಕಷ್ಟದ ದೃಶ್ಯವನ್ನು ನಾವೆಲ್ಲರೂ ಕಣ್ಣಾರೆ ಕಾಣುತ್ತಿದ್ದೇವೆ. ಜಾತಿ, ಧರ್ಮದ ಹೆಸರಿನಲ್ಲಿ ಮೂಲಭೂತವಾದ ಮತ್ತು ಕೋಮುವಾದವು ದಿನದಿಂದ ದಿನಕ್ಕೆ ವಿಕೃತ ಸ್ವರೂಪವನ್ನು ತಾಳುತ್ತಿದೆ. ಆದರೆ ಇಲ್ಲಿ ಮಾನವೀಯ ಅಂತಃಕರಣದ ನೆಲೆಯಲ್ಲಿ ನಿಂತು ನೋಡಿದಾಗ ಕನಿಕರ ಉಂಟಾಗುತ್ತದೆ. ಇನ್ನು ಅನೇಕ ಕಡೆ ಹಿಂಸಾತ್ಮಕ ಕೆಲಸದಲ್ಲಿ ಕೆಲ ವ್ಯಕ್ತಿಗಳ ಕುಮ್ಮಕ್ಕಿನಿಂದ ಸಮಾಜದ ಸ್ವಾಸ್ಥ ಹಾಳಾಗುತ್ತಿದೆ.
ಅನ್ಯಧರ್ಮಿಯರು ಪರಸ್ಪರ ಕಿತ್ತಾಟ ಮಾಡುವಂತಹ ಚಿಲ್ಲರೆ ಪ್ರವೃತ್ತಿಯಿಂದ ಸಾಮಾಜಿಕ ಬದಲಾವಣೆ ಸಾಧ್ಯವೇ ಇಲ್ಲ ಎಂಬುದನ್ನು ಯಾರು ಮರೆಯಬಾರದು. ಸಾಮಾಜಿಕ ಬದುಕಿನಲ್ಲಿ ಮನುಷ್ಯನ ವರ್ತನಗೆ ಬೇಸತ್ತು,ಮನುಷ್ಯ ಮನುಷ್ಯನ ನಡುವೆ ನಿರ್ಮಾಣಗೊಂಡಿರುವ ಅವಿಶ್ವಾಸ, ಅಸಮಾನತೆಯನ್ನು ಮೆಟ್ಟಿನಿಲ್ಲುವ ನೆಲೆಯಲ್ಲಿ ನಾವೆಲ್ಲರೂ ಚಿಂತನೆ ನಡೆಸಬೇಕಾಗಿದೆ.
ಈ ಗುಣಗಳು ಸರ್ವಧರ್ಮಿರಲ್ಲಿ ಮೂಡಿದಾಗ ಮಾತ್ರ ಇಂದಿನ ಆಧುನಿಕ ಸಮಾಜದಲ್ಲಿ ಸಮತವಾದದ ಮೌಲ್ಯಾಧಾರಿತ ಆದರ್ಶ ಸಮಾಜ ನಿರ್ಮಾಣ ಮಾಡಲು ಖಂಡಿತಾ ಸಾಧ್ಯವಾಗುತ್ತದೆ.ನಿರ್ಲಕ್ಷಕ್ಕೆ ಒಳಗಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳದ ಅದೆಷ್ಟೋ ಸಮುದಾಯದ ಜನರ ದನಿಯಾಗಿ,ಬಾಳಿಗೆ ಬೆಳಕಾಗಿ ನಿಂತವರು ಬುದ್ಧ. ಅದಕ್ಕಾಗಿ ಈಗಿನ ವರ್ತಮಾನದ ಕಾಲಕ್ಕೆ ಬುದ್ಧ ರ ಚಿಂತನೆಗಳು ಬಹಳ ಹೆಚ್ಚು ಪ್ರಸ್ತುತವಾಗಿವೆ ಮತ್ತು ಅವಶ್ಯಕತೆ ಇದೆ.
ಈ ಹಿನ್ನೆಲೆಯಲ್ಲಿ ಶತ ಶತಮಾನಗಳಿಂದ ಶೋಷಣೆಗೆ ಗುರಿಯಾಗಿರುವ ದಮನಿತರ ಬದುಕಿಗಾಗಿ ಬೆಳಕೊಂದನ್ನು ಕೊಡುವ ನಿಟ್ಟಿನಲ್ಲಿ ನಿಸ್ವಾರ್ಥ ಮನೋಭಾವದಿಂದ ಚಿಂತನ – ಮಂಥನ ಮಾಡುವುದು ಅಗತ್ಯವಿದೆ.
ಭಗವಾನ ಬುದ್ಧರು ಆಸೆಯೇ ದುಖಃಕ್ಕೆ ಮೂಲ ಎಂದು ಸಾರಿದರೇ, ಬಸವಣ್ಣನವರು ದಯೆ,ದಾಸೋಹ,ಸಕಲ ಜೀವಾತ್ಮರಿಗೂ ಲೇಸನೇ ಬಯಸುತ್ತಾ, ಕಾಯಕವೇ ಕೈಲಾಸ ಎಂದರು ಹಾಗೆ ಡಾ. ಅಂಬೇಡ್ಕರ್ ಅವರು ಶಿಕ್ಷಣ, ಸಂಘಟನೆ ಮತ್ತು ಒಗ್ಗಟ್ಟಿನ ಹೋರಾಟ ಎಂಬ ಸಂದೇಶವನ್ನು ಸಮಾಜಕ್ಕೆ ಸಾರಿದ್ದಾರೆ. ಹೀಗೆ ಇವರ ತತ್ವಗಳ ಸಾರವನ್ನು ತಿಳಿಸುವ ಈ ಸಂದೇಶಗಳು ಇಂದಿನ ಸಮಾಜಕ್ಕೆ ಪ್ರಸ್ತುತ ಹಾಗೂ ವರ್ತಮಾನದ ಈ ಕಾಲಕ್ಕೆ ಪ್ರೇರಣೆಯಾಗಿವೆ.ಶೋಕವಿಲ್ಲದ ನಾಡು, ವ್ಯಕ್ತಿಯ ನಿರ್ಮಾಣ ಬುದ್ಧನ ಆಶಯವಾಗಿತ್ತು. ತನ್ನ ಬಿಕ್ಕು ಸಂಘಗಳ ಮೂಲಕ ಎಲ್ಲರನ್ನೂ ತಲುಪುವ ಮತ್ತು ಶೋಕವಿಲ್ಲದ ನೈಜ ಪ್ರಜಾ ಪ್ರಭುತ್ವದ ನಾಡನ್ನು ಕಟ್ಟುವ ಧ್ಯೇಯ ಹೊಂದಿದ್ದರು.ಅದರಂತೆ ನಡೆದರು.
ಇವರ ಧ್ಯೇಯ ಒಂದೇ ಕಟ್ಟ ಕಡೆಯ ವ್ಯಕ್ತಿಯೂ ಈ ಸಮಾಜದಲ್ಲಿ ನೆಮ್ಮದಿಯಿಂದ ಬಾಳಬೇಕೆಂಬ ಅದಮ್ಯ ಬಯಕೆಯಾಗಿತ್ತು. ಅದೇ ರೀತಿ ಮಾನವನ ಉಜ್ವಲ
ಭವಿಷ್ಯ ರೂಪಿಸುವುದು ಇವರ ಮುಖ್ಯ ಧೈರ್ಯ ಗುರಿಯಾಗಿತ್ತು ಎನ್ನುವುದು ಮರೆಯುವಂತಿಲ್ಲ. ಇವರ ಆದರ್ಶ ನಿಲುಗಳ ತತ್ವಗಳನ್ನು ವರ್ತಮಾನ ಈ ಕಾಲ ಘಟ್ಟದ ಜನರ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಂತೋಷದಿಂದ ಬಾಳಲು ಸಾಧ್ಯ ಎನ್ನುವುದು ಸುಳ್ಳಲ್ಲ. ಕಾರಣ ವ್ಯಕ್ತಿಯು ವರ್ತಮಾನ ಕಾಲದಲ್ಲಿ ಶುದ್ಧ ಮನಸ್ಸಿನಿಂದ ಹಾಗೂ ಒಂದು ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು ಆ ಸದುದ್ದೇಶದ ಈಡೇರಿಕೆಗಾಗಿ ನಿರಂತರ ನಿಸ್ವಾರ್ಥ ಪ್ರಯತ್ನವನ್ನು ಮಾಡುತ್ತಲಿದ್ದರೆ ಅವನ ಇಡೀ ಜೀವಮಾನವೇ ಸಾರ್ಥಕ ಕಾಣಲಿದೆ.
ಏಕೆಂದರೆ ಭವಿಷ್ಯತ್ ಕಾಲವು ವರ್ತಮಾನ ಕಾಲಕ್ಕೆ ಬಂದೇ ಭೂತಕಾಲಕ್ಕೆ ಸೇರುತ್ತದೆಯಾದುದರಿಂದ ವರ್ತಮಾನ ಕಾಲವನ್ನು ವ್ಯರ್ಥಮಾಡದಿರೆಂಬ ಈ ಎಲ್ಲಾ ಮಾಹಾಪುರುಷರ ಅಮರವಾಣಿವಾದರಿಂದ ಮನುಷ್ಯನ ಜೀವನದ ಪಥವನ್ನು ಸರಿಯಾದ ದಿಕ್ಕಿನಲ್ಲಿ ಸಾಗಿಸುತ್ತದೆ.ಆದರೆ ವರ್ತಮಾನದಲ್ಲಿ ಕೆಲವೊಂದಿಷ್ಟು ಜನ ಈ ದಾರ್ಶನಿಕರನ್ನು ಒಂದು ಜಾತಿಗೆ ಸೀಮಿತ ಮಾಡಿ,ಸಣ್ಣತನವನ್ನು ತೋರುತ್ತಿರುವುದು ದುಷ್ಟಕರ ಸಂಗತಿ. ಇಂತಹ ವಿಚಾರಗಳಿಗೆ ಬೆಲೆ ಕೊಡದೆ ಆದರ್ಶ ಸಮಾಜದಡಗೆ ಕೊಂಡೊಯ್ಯುವ ತತ್ವಗಳಿಗೆ ಬೆಲೆ ಕೊಡುವ ಸಂದರ್ಭ ಸದ್ಯ ಎದುರಾಗಿದೆ ಎನ್ನುವುದು ಸರ್ವರೂ ಮನಗಂಡು. ಈ ಮಾಹಾಪುರುಷರು ವಿಶ್ವಮಾನ್ಯರು. ವಿಶ್ವಕ್ಕೇ ಬೇಕಾದವರು ಎಂದು ತಿಳಿದುಕೊಂಡು ಮುನ್ನಡೆಯಬೇಕಾಗಿದೆ.
ಬುದ್ಧ ರ ಪ್ರಸ್ತುತ ವಿಚಾರಗಳು :
ಬುದ್ಧರು ಹೇಳುವ ವೈಚಾರಿಕ ಮಾತುಗಳನ್ನು ಜೀವನದಲ್ಲಿ ಪ್ರತಿಯೊಬ್ಬರು ಅನುಸರಿಸಿಕೊಂಡು ಹೋದರೆ ಯಶಸ್ಸನ್ನು ಕಾಣಬಹುದು.
ಹನ್ನೆರಡನೇ ಶತಮಾನದ ಬಸವಣ್ಣನವರು ಅನುಭವ ಮಂಟಪದ ಮೂಲಕ ಇದೇ ಆಶಯದೊಂದಿಗೆ ಕೆಲಸ ಮಾಡಿದರು. ಈ ಇಬ್ಬರು ಮಹನೀಯರ ಆಶಯಗಳಿಗೆ ಅಂಬೇಡ್ಕರ್ ಸಂವಿಧಾನದಲ್ಲಿ ಶಾಸನಾತ್ಮಕ ರೂಪ ಕೊಟ್ಟರು.ಅಂಬೇಡ್ಕರ್ ರೂಪಿಸಿದ ಶಿಕ್ಷಣ, ಸಂಘಟನೆ, ಹೋರಾಟದ ಧ್ಯೇಯ ವಾಕ್ಯ ದಮನಕ್ಕೊಳಗಾದ ಜನರ ಬದುಕಿನ ಸಾಧನವಾದವು.
ಈ ನಿಟ್ಟಿನಲ್ಲಿ ಬುದ್ಧ ರ ಸ್ವಾಭಿಮಾನಿ ಚಳವಳಿ ಮೊದಲು ದಲಿತ ಕೇರಿಗಳಿಂದ ದಲಿತೇತರ ಬೀದಿಗಳಿಗೂ ಹಬ್ಬಿ ಅವರ ವಿಚಾರ, ತತ್ವಸಿದ್ಧಾಂತಗಳು ಸರ್ವಜನರ ಕಲ್ಯಾಣಕ್ಕಾಗಿ, ಸ್ವಾಭಿಮಾನಿ ನಾಡಿನ ಹುಟ್ಟಿಗಾಗಿ, ಮಾನವೀಯತೆಯ ಅಭಿವೃದ್ಧಿಗಾಗಿ ಸರ್ವಸ್ವವನ್ನೂ ಧಾರೆಯೆರೆದು ದುಡಿದಿದ್ದಾರೆ.
ಇವರ ತತ್ವಗಳನ್ನು ಪಾಲಿಸಿಕೊಂಡು ಬಂದಲ್ಲಿ ಅಂದರೆ ವರ್ತಮಾನದ ಈಗಿನ ಕಾಲದಲ್ಲಿ ಖಂಡಿತಾ ಶಾಂತಿ ನೆಲೆಸುತ್ತೆ. ಈ ಎಲ್ಲಾ ವಿಚಾರಗಳೂ ಎಲ್ಲ ಕಾಲಕ್ಕೂ ಪೂರ್ಣ ಪ್ರಮಾಣದಲ್ಲಿ ಪ್ರಸ್ತುತವಾಗದಿರಬಹುದು. ಆದರೆ ಬುದ್ಧರ ಚಾರಿತ್ರಿಕ ಮಹತ್ವದ ತತ್ವಗಳು ಸದಾಕಾಲದಲ್ಲೂ ಜೀವಂತವಾಗಿರುತ್ತದೆ. ಕೆಲವು ಮುಖ್ಯ ಆಶಯಗಳು ಸಮಕಾಲೀನ ಮಹತ್ವ ಮತ್ತು ಪ್ರಸ್ತುತತೆಯನ್ನು ಪಡೆದಿರುತ್ತವೆ. ಬುದ್ಧ ರ ಸಮಾಜ ಮುಖಿ ಚಳವಳಿಯ ಕೆಲವು ಪ್ರಮುಖ ವಿಚಾರಗಳೂ ಪರಿಕಲ್ಪನೆಗಳೂ ಇಂದಿಗೂ ಪ್ರಸ್ತುತವೆನಿಸುತ್ತವೆ. ಈ ದಾರ್ಶನಿಕರ ಚಳವಳಿಯೊಳಗಿನ ಆಂತರಿಕ ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಆದರ್ಶದ ಸಮಾಜದ ಮಾದರಿಯೆಂದು ಪರಿಗಣಿಸಬೇಕು.
ಇವರ ಚಿಂತನೆಗಳು ಇಂದಿನ ಸಮಾಜದಲ್ಲಿ ಚರ್ಚೆಯಾಗುವುದು ವಿಶೇಷ ಅಲ್ಲ. ಅಸ್ಪೃಶ್ಯರಲ್ಲದವರ ನಡುವೆ ಇವು ಹೆಚ್ಚು ಚರ್ಚೆಯಾಗಬೇಕು. ದೇಶದ ಎಲ್ಲಾ ಸಮಾಜ ಬಾಂಧವರು ಬುದ್ಧ ರವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರ ಜಯಂತಿ ಆಚರಣೆ ಮಾಡುವುದು ಒಳ್ಳೆಯದು ಜೊತೆಗೆ ವಿಶೇಷವಾಗಿ ಸವರ್ಣೀಯ ಸಂಘಟನೆಗಳು ಈ ಮಹನೀಯರ ಚಿಂತನೆ ಮಾಡುವುದು ಅತ್ಯಗತ್ಯವಾಗಿದೆ.
ಅಂದಹಾಗೆ ಮಾನವೀಯ ಮಹಾಸಾಧಕರಾದ ಇವರು ವಿಶ್ವದ ಸುದ್ದಿ ಕೇಂದ್ರವಾಗಿದ್ದಾರೆ.ಸಮಾಜಿಕ, ಶೈಕ್ಷಣಿಕ ಕ್ರಾಂತಿಯ ಕಾರಣಕ್ಕಲ್ಲ, ಇವತ್ತಿನ ಧಾರ್ಮಿಕ ಹಕ್ಕೊತ್ತಾಯ ಮತ್ತು ರಾಜಕೀಯ ಕಾರಣಗಳಿಗಾಗಿ, ಸದಾ ಅರಿವು, ಐಕ್ಯತೆ ಮತ್ತು ಪ್ರಯತ್ನಶೀಲತೆಯನ್ನು ಉಳಿಸಿಕೊಂಡಿರಬೇಕೆಂಬ ಇವರ ಮೂಲಮಂತ್ರಗಳು ಇದ್ದ ಕಾರಣಗಳಿಂದ ಇವರ ಚಿಂತನೆಗಳು ಈ ವರ್ತಮಾನದ ಕಾಲದ ಮನುಕುಲದ ಉದ್ಧಾರಕ್ಕಾಗಿ ಅವಶ್ಯಕತೆ ಇದ್ದೆ ಇದೆ. ಇವರ ಬದುಕು ಮತ್ತು ಆಚರಣೆಯಿಂದ ಕಲಿಯಬೇಕಾದ್ದು ಬಹಳಷ್ಟು ಇದೆ ಎನ್ನುವುದನ್ನು ಅರಿತು, ನಮ್ಮ ಮೂಲ ಅಭಿವೃದ್ಧಿ – ಆನಂದ ಆಶಯಕ್ಕಾಗಿ ಎಂದೂ ದಣಿವರಿಯದ ದುಡಿಮೆ ಮಾಡಬೇಕು, ನಂಬಿದ ತತ್ವಕ್ಕಾಗಿ ಎಂದು ಹಿಂದೆ ಸರಿಯಬಾರದು. ದಿಟ್ಟತನ ಮತ್ತು ಆಶಾವಾದ ಈ ಕಾಲ ನಮ್ಮೆದುರು ದೀರ್ಘ ನಡಿಗೆಯ ಸವಾಲನ್ನು ಇರಿಸಿದೆ ಎನ್ನುವುದು ಸುಳ್ಳಲ್ಲ ಹಾಗಾಗಿ ಸವಾಲನ್ನು ಸ್ವೀಕರಿಸಿ ಮುನ್ನಡೆಯಲು ಇವರ ವಿಚಾರಗಳ ಚೇತನ ಸ್ಪೂರ್ತಿದಿಂದ ವಿಶ್ವಾಸವನ್ನು ಪಡೆದುಕೊಳ್ಳೋಣ. ಮುಂದಿನ ದಿನಗಳಲ್ಲಿ ನಮ್ಮನ್ನು ನಾವು ಸೇವಾ ಕಾರ್ಯ, ದೇಶ ಸೇವೆ ಮತ್ತು ದೀನದಲಿತರ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಅಗತ್ಯವಿದೆ.
ಸರ್ವರ ಜನಾಂಗದ ದನಿಯಾದ ಬುದ್ಧ : ಇವರ ತತ್ವಾದರ್ಶಗಳು ಇಂದಿನ ಪ್ರಸ್ತುತ ವರ್ತಮಾನ ಸಮಾಜಕ್ಕೆ ಅನಿವಾರ್ಯ ಎನ್ನುವುದು ತಿಳಿದುಕೊಂಡು, ಇವರ ಆದರ್ಶ ತತ್ವಗಳನ್ನು ಪ್ರತಿಯೊಬ್ಬರು ಪಾಲಿಸಿದಾಗ ಮಾತ್ರ ವರ್ತಮಾನ ಕಾಲ, ಅಭಿವೃದ್ಧಿಯ ಕಾಲವಾಗಬಹುದು. ಸತ್ಯದ ಸನ್ಮಾರ್ಗದಲ್ಲಿ ನಡೆಯುವ ಪ್ರಮಾಣಿಕ ಪ್ರಯತ್ನ ಮಾಡಬೇಕು.
ಸಮಾನತೆ, ಸಹಬಾಳ್ವೆ, ಸಾಮಾಜಿಕ ಕ್ರಾಂತಿಕಾರಿ ಚಿಂತನೆಗಳು ಜನಮಾನಸಕ್ಕೆ ಮುಟ್ಟಿಸುವ ಕೆಲಸ ನಿರಂತರವಾಗಿ ಮಾಡುವುದು ಸೇರಿದಂತೆ ಸೌಹಾರ್ದ ಸಮತಾ ಸಾಧಕರ ಜತೆಗೂಡಿ ಜಾತಿವಾದ ಮತ್ತು ಧಾರ್ಮಿಕ ಮೂಲಭೂತವಾದಿಗಳಿಗೆ ನೈತಿಕ ಪಾಠ ಹೇಳಬೇಕಾಗಿದೆ. ನಿಸ್ವಾರ್ಥದಿಂದ ದುಡಿದು ಸಮಾಜದ ಹಿತವನ್ನು ಬಯಸೋಣ, ಸ್ವಾರ್ಥ ರಾಜಕಾರಣ ಮತ್ತು ಧರ್ಮಕಾರಣಗಳಿಗೆ ನೀತಿಯ ಪಾಠವನ್ನು ಬೋಧಿಸೋಣ.
ಪರಿವರ್ತನೆಯ ಆಶಯದ ವಿಚಾರವಾದ ವ್ಯಕ್ತಿಯ ಜತೆಗೆ ಸಮೂಹದ ಪರಿವರ್ತನೆಗೆ ನಾಂದಿ ಹಾಡುವ ಹಾಗೇ ವಿಚಾರವಂತರು ಶ್ರೀಮಂತರಾಗಲ್ಲ. ಅವರ ವಿಚಾರಗಳೇ ದೊಡ್ಡ ಶ್ರೀಮಂತಿಕೆ. ಅವರೆಂದೂ ಅಮಿಷಗಳ ಜತೆ ಹೋಗುವುದಿಲ್ಲ. ಹೋಗಬಾರದು. ಹಿತಾಸಕ್ತಿಯ ಜತೆಗೆ ಹೋದಾಗ ವಿಚಾರವಾದಕ್ಕೆ ಗೆಲುವು ತಂದು ಕೊಡಲು ಹೇಗೆ ಸಾಧ್ಯ? ನಾವೂ ಕೂಡಾ ಮೂಲಭೂತವಾದ, ಜಾತಿವಾದದ ಜತೆ ಯಾವತ್ತೂ ರಾಜಿ ಮಾಡಿಕೊಳ್ಳುವುದಿಲ್ಲ. ಯಾವತ್ತಿಗೂ ಅಂತಹ ಪ್ರಮೇಯ ಬರುವುದಿಲ್ಲ ಎನ್ನುವ ವಿಚಾರಗಳನ್ನು ಇಂದಿನ ಜನಸಾಮಾನ್ಯರಲ್ಲಿ ಮೂಡಲಿ ಎನ್ನುವುದೇ
ಈ ಲೇಖನದ ಬಯಕೆ.
ಗೌರವ ನುಡಿ : ಶಾಂತಿಯ ನಾಡಲಿ ಅಶಾಂತಿಯನ್ನು ಸೃಷ್ಟಿಸಿ, ಸಮಾನತೆಯ ಜಾಗದಲ್ಲಿ ಅಸಮಾನತೆಯನ್ನು ಸೃಷ್ಟಿಸಿ, ಮನುಷ್ಯ ಮನುಷ್ಯನನ್ನು ಕೀಳಾಗಿ ನೋಡುವಂತಹ ಅಮಾನವೀಯ ಸಮಾಜದಲ್ಲಿ ಸಮಾನತೆಯ ಸಮಾಜದ ಕನಸು ಕಾಣುವ ಜೀವಸೆಲೆ ಭಗವಾನ್ ಬುದ್ಧ ರ ಉಜ್ವಲ್ ತತ್ವಗಳ ಚಿಂತನೆಗಳಾಗಿವೆ.
ಲೇಖಕರು :ಸಂಗಮೇಶ ಎನ್ ಜವಾದಿ.
ಸಾಹಿತಿ, ಪ್ರಗತಿಪರ ಚಿಂತಕರು.
ನಂ : 3/135,ರಾಜ್ ಖಾನವಾಳಿ, ಆರ್ಯ ಸಮಾಜದ ಹತ್ತಿರ ಚಿಟಗುಪ್ಪ – 585412.
ತಾಲೂಕು – ಚಿಟಗುಪ್ಪ,ಬೀದರ ಜಿಲ್ಲೆ.
9663809340.
Email I’d : –[email protected]