ಮಂಗಳೂರು: ಅಕ್ರಮವಾಗಿ ಬಂದೂಕು ಮತ್ತು ಸಜೀವ ಮದ್ದುಗುಂಡುಗಳನ್ನು ಹೊಂದಿದ್ದ ಆರೋಪದ ಮೇಲೆ ಇಬ್ಬರನ್ನು ಮಂಗಳೂರು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ನಿವಾಸಿಗಳಾದ ಮೊಹಮ್ಮದ್ ಅಸ್ಗರ್ (26) ಮತ್ತು ಅಬ್ದುಲ್ ನಿಸಾರ್ ಕೆ (29) ಎಂದು ಗುರುತಿಸಲಾಗಿದೆ. ಉಳ್ಳಾಲ ತಾಲೂಕಿನ ತಲಪಾಡಿ ಗ್ರಾಮದ ಪಿಲಿಕೂರು ಎಂಬಲ್ಲಿ ಇಬ್ಬರು ವ್ಯಕ್ತಿಗಳು ಯಾವುದೇ ಪರವಾನಗಿ ಇಲ್ಲದ ಕಪ್ಪು ಕಾರಿನಲ್ಲಿ ಪಿಸ್ತೂಲ್ ಹಿಡಿದುಕೊಂಡು ಆತಂಕ ಸೃಷ್ಟಿ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ದಾಳಿ ನಡೆಸಿದ ಸಿಸಿಬಿ ತಂಡವು ಒಂದು ಪಿಸ್ತೂಲ್, ಎರಡು ಜೀವಂತ ಗುಂಡುಗಳು, ಎರಡು ಮೊಬೈಲ್ ಫೋನ್ಗಳು ಮತ್ತು ಕಪ್ಪು ಹುಂಡೈ ವೆರ್ನಾವನ್ನು ಜಪ್ತಿ ಮಾಡಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. ಒಟ್ಟು 7,15,000 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.