ಬೆಳಗಾವಿ,21: ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಸಹ ಮಾಲಿಕತ್ವದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕಟ್ಟಿ ಗ್ರಾಮದ ಹೊರ ವಲಯದ ಪ್ರಿಯಾ ಎಕ್ಸ್ಪೋರ್ಟ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟವಾಗಿ ಮೂವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯ ಓರ್ವ ಮಹಿಳೆ ಮೃತಪಟ್ಟ ಘಟನೆ ನಡೆದಿದೆ. ಶೋಭಾ ತೇಲಿ ಮೃತಪಟ್ಟ ಮಹಿಳೆಯಾಗಿದ್ದಾರೆ. ಗಾಯಗೊಂಡ ಇಬ್ಬರ ಸ್ಥಿತಿ ಚಿಂತಾಜನಿಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಪ್ರಿಯಾ ಎಕ್ಸ್ಪೋರ್ಟ್ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಮತ್ತು ಸಾಂಗಲಿ ಉದ್ಯಮಿಯೊಬ್ಬರ ಸಹಭಾಗಿತ್ವದ ಮೆಕ್ಕೆಜೋಳ ಪಾಲಿಷ್ ಮಾಡಿ ಎಕ್ಸ್ಪೋರ್ಟ್ ಮಾಡುವ ಕಾರ್ಖಾನೆಯಾಗಿದ್ದು, ಹೈ ಪ್ರೆಶರ್ನಿಂದ ಬಾಯ್ಲರ್ ಸ್ಪೋಟಗೊಂಡಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಬ್ಲಾಸ್ಟ್ ಆದ ತೀವ್ರತೆಗೆ ಕಾರ್ಖಾನೆಯ ಗೋಡೆ ಬಿರುಕು ಬಿಟ್ಟಿದ್ದು, ಕೆಲ ಕಾಲ ಸುತ್ತಮುತ್ತ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಗ್ನಿ ಶಾಮಕ ಸಿಬ್ಬಂದಿ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಅಥಣಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.