ಬೆಂಗಳೂರು,21: ”ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಕುರಿತಂತೆ ಎಸ್ಐಟಿ ತನಿಖೆ ಮೇಲೆ ಸರ್ಕಾರದ ಒತ್ತಡವಿಲ್ಲ. ನಿಯಮ ಏನಿದೆಯೋ ಅದರಂತೆ ಎಸ್ಐಟಿ ಕೆಲಸ ಮಾಡುತ್ತದೆ” ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಸದಾಶಿವ ನಗರ ತಮ್ಮ ನಿವಾಸದಲ್ಲಿ ಇಂದು (ಮಂಗಳವಾರ) ಮಾತನಾಡಿದ ಅವರು, ”ವಿದೇಶಾಂಗ ಇಲಾಖೆ ಪಾಸ್ಪೋರ್ಟ್ ರದ್ದು ಮಾಡಿದರೆ ಪ್ರಜ್ವಲ್ ವಿದೇಶದಲ್ಲಿ ಇರಲು ಆಗಲ್ಲ. ವಾಪಸ್ ಬರಲೇಬೇಕಾಗುತ್ತೆ. ಆದ್ರೆ, ನಮಗೆ ಬಹಳ ಕೆಲಸ ಇದ್ದು, ಬರ ನಿರ್ವಹಣೆ, ಆಡಳಿತದ ಜವಾಬ್ದಾರಿ ನಮ್ಮ ಮೇಲಿದೆ. ಕಾಂಗ್ರೆಸ್ಗೆ ಬೇರೆ ಕೆಲಸ ಇದೆ ಎಂದು ಹೆಚ್ಡಿಕೆ ಯಾವ ಉದ್ದೇಶದಿಂದ ಹೇಳಿದ್ದಾರೋ ಗೊತ್ತಿಲ್ಲ” ಎಂದು ತಿಳಿಸಿದರು.
”ಬರ ಪರಿಹಾರ ಕೊಟ್ಟಿದ್ದು, ಕೋರ್ಟ್ ಸೂಚನೆ ನಂತರ ಇನ್ನೂ ಬರ ಪರಿಹಾರ ಕೇಂದ್ರದಿಂದ ಬರಬೇಕು. ಆ ಸಹಕಾರವನ್ನು ಅವರು ಮೊದಲು ಕೊಡಲಿ. ನಮ್ಮ ಸಾಧನೆ, ಗ್ಯಾರಂಟಿ ನೋಡಿ ಬಿಜೆಪಿಗೆ ಹೊಟ್ಟೆ ಉರಿ” ಎಂದು ಇದೇ ವೇಳೆ ಟೀಕಿಸಿದರು.
ಲೋಕಸಭೆಯಲ್ಲಿ 20 ಸ್ಥಾನ ಗೆಲ್ಲುವ ಹಗಲು ಕನಸು ಕಾಣ್ತಿದೆ ಕಾಂಗ್ರೆಸ್ ಎಂಬ ಬಿಜೆಪಿ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿ, ”ನಾವು ಹಗಲು ಕನಸು ಕಂಡ್ರೆ ಅವರೇನು ರಾತ್ರಿ ಕನಸು ಕಾಣ್ತಿದ್ದಾರಾ? ಕನಸು ಯಾವಾಗ ಕಂಡ್ರೂ ಕನಸೇ ಆಗಿದೆ. ಹಗಲಲ್ಲೂ, ರಾತ್ರಿಯಲ್ಲೂ ಕಂಡ್ರೂ ಅದು ಕನಸೇ ಆಗಿದೆ. ಸಿಎಂ ಎಷ್ಟು ಸ್ಥಾನ ಕಾಂಗ್ರೆಸ್ ಗೆಲ್ಲುತ್ತದೆ ಅಂತ ಹೇಳಿದ್ದಾರೋ ಅಷ್ಟು ಗೆಲ್ತೇವೆ. ನಾನು ಬೇರೆ ಹೇಳುವ ಅಗತ್ಯ ಇಲ್ಲ” ಎಂದರು.