ನವದೆಹಲಿ,21: ಮಾಜಿ ಕೇಂದ್ರ ಸಚಿವ, ಸಂಸದ ಜಯಂತ್ ಸಿನ್ಹಾಗೆ ಬಿಜೆಪಿ ನೊಟೀಸ್ ಜಾರಿ ಮಾಡಿದೆ. ನೆನ್ನೆ ನಡೆದ 5 ನೇ ಹಂತದ ಚುನಾವಣೆ ವೇಳೆ ಜಯಂತ್ ಸಿನ್ಹಾ ಮತದಾನ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರಣ ಕೇಳಿ ನೊಟೀಸ್ ನೀಡಿದೆ.
ಜಯಂತ್ ಸಿನ್ಹಾ ಪ್ರತಿನಿಧಿಸುತ್ತಿದ್ದ ಜಾರ್ಖಂಡ್ ನ ಹಜಾರಿಬಾಗ್ ಕ್ಷೇತ್ರದಿಂದ ಈ ಬಾರಿ ಮನೀಶ್ ಜೈಸ್ವಾಲ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಅಭ್ಯರ್ಥಿಯ ಘೋಷಣೆಯಾದ ಬಳಿಕ ಜಯಂತ್ ಸಿನ್ಹಾ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು.
ಇದಕ್ಕೂ ಮುನ್ನ ಮಾರ್ಚ್ ನಲ್ಲಿ ಟ್ವೀಟ್ ಮಾಡಿದ್ದ ಜಯಂತ್ ಸಿನ್ಹಾ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡದೇ ಇರುವ ಇಂಗಿತ ವ್ಯಕ್ತಪಡಿಸಿದ್ದರು. ಇದೇ ಮಾದರಿಯಲ್ಲಿ ದೆಹಲಿಯ ಸಂಸದ ಗೌತಮ್ ಗಂಭೀರ್ ಸಹ ತಮ್ಮನ್ನು ಪಕ್ಷದ ಎಲ್ಲಾ ಹುದ್ದೆ ಮತ್ತು ಜವಾಬ್ದಾರಿಗಳಿಂದ ಮುಕ್ತಗೊಳಿಸುವಂತೆ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದರು.
“ಹಜಾರಿಬಾಗ್ ಲೋಕಸಭಾ ಕ್ಷೇತ್ರದಿಂದ ಮನೀಶ್ ಜೈಸ್ವಾಲ್ ಅವರನ್ನು ಅಭ್ಯರ್ಥಿಯಾಗಿ ಪಕ್ಷ ಘೋಷಿಸಿದಾಗಿನಿಂದ ನೀವು ಸಂಘಟನಾ ಕಾರ್ಯ ಮತ್ತು ಚುನಾವಣಾ ಪ್ರಚಾರದಲ್ಲಿ ಯಾವುದೇ ಆಸಕ್ತಿ ವಹಿಸುತ್ತಿಲ್ಲ. ನಿಮಗೆ ಮತ ಚಲಾಯಿಸುವ ಅಗತ್ಯವಿದೆ ಎಂದೆನಿಸಲೂ ಇಲ್ಲ. ನಿಮ್ಮ ನಡವಳಿಕೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ” ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆದಿತ್ಯ ಸಾಹು ನೋಟಿಸ್‌ನಲ್ಲಿ ತಿಳಿಸಿದ್ದಾರೆ.
ಎರಡು ದಿನಗಳಲ್ಲಿ ತಮ್ಮ ನಿಲುವನ್ನು ವಿವರಿಸುವಂತೆ ಪಕ್ಷ ಸಿನ್ಹಾ ಅವರನ್ನು ಕೇಳಿದೆ. 61 ವರ್ಷದ ಸಿನ್ಹಾ ಇನ್ನೂ ನೋಟಿಸ್‌ಗೆ ಪ್ರತಿಕ್ರಿಯಿಸಿಲ್ಲ. ಸಿನ್ಹಾ ಅವರು 2019 ರಲ್ಲಿ ಕಾಂಗ್ರೆಸ್‌ನ ಗೋಪಾಲ್ ಸಾಹು ಅವರನ್ನು ಸೋಲಿಸಿ 4.79 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು.