ಬಳ್ಳಾರಿ,20: ಮಾನವ ತನ್ನ ಸ್ವಾರ್ಥವನ್ನು ಬಿಟ್ಟು ಮಾನವೀಯತೆಯ ಗುಣಗಳನ್ನು ಸ್ವಾರ್ಥ ಸೇವಾ ಮನೋಭಾವನೆಯನ್ನು ಬೆಳೆಸಿಕೊಂಡಾಗ ಮಾತ್ರ ಬಹಳ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ವಿ ಎಸ್ ಕೆ ವಿಶ್ವವಿದ್ಯಾಲಯದ ಶುದ್ಧ ವಿಜ್ಞಾನ ನಿಕಾಯದ ಪ್ರಾಧ್ಯಾಪಕರು ಹಾಗೂ ಡೀನರಾದ ಡಾ. ಶಶಿಕಾಂತ್ ಹೆಚ್ ಮಜಿಗಿರವರು ತಿಳಿಸಿದರು.
ನಗರದ ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಅಂಗವಾಗಿ ಪ್ರಥಮ ಚಿಕಿತ್ಸೆ ತರಬೇತಿಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ರೆಡ್ ಕ್ರಾಸ್ ಸಂಸ್ಥೆಯ ಏಳು ಮೂಲಭೂತ ತತ್ವಗಳಾದ ಮಾನವೀಯತೆ, ಪಕ್ಷಪಾತರಾಹಿತ್ಯ, ತಾಟಸ್ತ್ಯ ಸ್ವಾತಂತ್ರ್ಯ, ಸ್ವಯಂಸೇವೆ, ಏಕತೆ ಹಾಗೂ ವಿಶ್ವವ್ಯಾಪಕತೆ ಇವುಗಳ ಅಂಶಗಳನ್ನು ಮೈಗೂಡಿಸಿಕೊಳ್ಳುವ ಗುರಿ ಹೊಂದಬೇಕಾಗಿರುತ್ತದೆ. ಹಾಗೆಯೇ ವಿದ್ಯಾರ್ಥಿ ಯುವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವ ಮತ್ತು ಈ ತತ್ವಗಳನ್ನು ಕಾರ್ಯರೂಪಕ್ಕಿಳಿಸುವ ಉದ್ದೇಶದಿಂದ ಯುವ ರೆಡ್ ಕ್ರಾಸ್ ನ್ನು ಸಂಘಟಿಸಲಾಗುತ್ತದೆ. ಆ ದಿಶೆಯಲ್ಲಿ ಈ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕವನ್ನು ಉತ್ತಮವಾಗಿ ಸಂಘಟಿಸಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯವಾದ ಕಾರ್ಯ ಎಂದು ಪ್ರಶಂಶಿಸಿದರು.
ಇದಲ್ಲದೆ ಯುವಜನರಲ್ಲಿ ಆದರ್ಶ ಅಂಶಗಳಾದ ತನ್ನ ಸ್ವಂತ ಮತ್ತು ಇತರರ ಆರೋಗ್ಯದ ಬಗ್ಗೆ ಗಮನ ಹರಿಸುವುದು, ಸ್ವಯಂಸೇವಾ ಮನೋಭಾವನೆಯನ್ನು ಬೆಂಬಲಿಸುವುದು ರೆಡ್ ಕ್ರಾಸ್ನ ಪ್ರಮುಖ ಉದ್ದೇಶವಾಗಿದೆ ಎಂದರು. ಹಾಗೆಯೇ ಪ್ರತಿಯೊಬ್ಬರು ಪರಿಸರದ ಬಗ್ಗೆ ಕಾಳಜಿಯನ್ನ ವಹಿಸಿ ಒಂದೊಂದು ಗಿಡವನ್ನು ನೆಟ್ಟು ಉತ್ತಮ ಪರಿಸರದೊಂದಿಗೆ ಜೀವ ಸಂಕುಲಗಳು ಜೀವಿಸಲು ಅನುಕೂಲ ಮಾಡಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಪ್ರಥಮ ಚಿಕಿತ್ಸೆ ತರಬೇತಿದಾರರಾದ ಶ್ರೀ ನಿಸಾರ್ ಅಹಮದ್ ರವರು ಮಾತನಾಡುತ್ತಾ, ಪ್ರಥಮ ಚಿಕಿತ್ಸೆಯ ಇತಿಹಾಸ ನಾವು ಜಗತ್ತಿನ ಯಾವ ಭಾಗವನ್ನು ಉದ್ದೇಶಿಸಿ ಹೇಳುತ್ತೇವೆ ಎಂಬುದರ ಮೇಲೆ ಬದಲಾಗುತ್ತದೆ. ಆ ದೃಷ್ಟಿಯಲ್ಲಿ ಪ್ರಸ್ತುತ ದಿನಮಾನಗಳಲ್ಲಿ ಪ್ರಥಮ ಚಿಕಿತ್ಸೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಆರೋಗ್ಯದಲ್ಲಿ ವ್ಯತ್ಯಯ ವಾದಾಗ ಸಾವುಗಳು ಸಂಭವಿಸುವುದು ಕಾಣಬಹುದಾಗಿದೆ. ಹಾಗಾಗಿ ಯಾವುದೇ ರೀತಿಯ ಆಕಸ್ಮಿಕ ಘಟನೆಗಳು ನಡೆದಾಗ ಉದಾಹರಣೆಗೆ ಹಾವು ಕಚ್ಚಿದಾಗ, ನೀರಿನಲ್ಲಿ ಮುಳುಗಿದಾಗ, ಬೆಂಕಿಯಿಂದ ಸುಟ್ಟಾಗ, ಅಪಘಾತಗಳು ಸಂಭವಿಸಿದಾಗ, ಹೃದಯ ಸ್ತಂಭನವಾದಾಗ, ತತಕ್ಷಣದಲ್ಲಿ ಯಾವ ರೀತಿಯಲ್ಲಿ ಪ್ರಥಮ ಚಿಕಿತ್ಸೆಯನ್ನು ಕೈಗೊಳ್ಳಲು ಸಾಧ್ಯತೆ ಇರುತ್ತದೆ ಎಂಬುದನ್ನು ಹಲವಾರು ಪ್ರಾತ್ಯಕ್ಷಿಕೆಗಳಿಂದ ವಿದ್ಯಾರ್ಥಿಗಳಿಗೆ ಅರ್ಥವಾಗುವ ಹಾಗೆ ಉತ್ತಮ ಮಾಹಿತಿಯೊಂದಿಗೆ ತರಬೇತಿಯನ್ನು ನೀಡಿದರು.
ಜೊತೆಗೆ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ತಮ್ಮನ್ನು ತಾವು ತೊಡಗಿಸಿಕೊಂಡು ಜನರ ಜೀವನವನ್ನು ಉಳಿಸಿದ ಹಲವು ಸಂದರ್ಭಗಳನ್ನು ನೆನಪಿಸಿಕೊಂಡು ಮೆಲುಕು ಹಾಕಿದರು.
ಪ್ರಾಸ್ತಾವಿಕವಾಗಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಹಾಗೂ ರೆಡ್ ಕ್ರಾಸ್ ನ ಕಾರ್ಯಕ್ರಮಾಧಿಕಾರಿಯಾದ ಎನ್. ಶ್ರೀಕಾಂತ ಮುನಿ ಮಾತನಾಡುತ್ತಾ, ರೆಡ್ ಕ್ರಾಸ್ ಸಂಸ್ಥೆಯ ಉಗಮದ ಬಗ್ಗೆ, ಅಂತರಾಷ್ಟ್ರೀಯ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ‘ಮಾನವೀಯತೆಯಿಂದ – ಶಾಂತಿಯೆಡೆಗೆ’ ಎಂಬ ತತ್ವದಡಿಯಲ್ಲಿ ಕಾರ್ಯನಿರ್ವಹಿಸುವ ಬಗ್ಗೆ, ಅದರ ಗುರಿ ಉದ್ದೇಶಗಳ ಬಗ್ಗೆ, ಯುವ ರೆಡ್ ಕ್ರಾಸ್ ನ ಕರ್ತವ್ಯಗಳ ಬಗ್ಗೆ, ವಿವರವಾಗಿ ತಿಳಿಸುವ ಮೂಲಕ ರೆಡ್ ಕ್ರಾಸ್ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಜಾನ್ ಹೆನ್ರಿ ಡ್ಯೂನಾಂಟ್ ರವರ ಜನ್ಮದಿನವಾದ ಮೇ 8 ರಂದು ವಿಶ್ವ ರೆಡ್ ಕ್ರಾಸ್ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ವಿ ರಾಮಾಂಜನೇಯ ಮಾತನಾಡುತ್ತಾ, ಪ್ರಸ್ತುತ ದಿನಮಾನಗಳಲ್ಲಿ ಯುವಜನತೆ ಜಾಗೃತರಾಗಿ ತಮ್ಮ ಕರ್ತವ್ಯಗಳ ಮೂಲಕ ಸೇವಾ ಮನೋಭಾವದ ಪ್ರವೃತ್ತಿಯನ್ನು ಹೊಂದಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಎ. ನಾಗೇಶ್ ಬಾಬು, ಆರ್. ಚಂದ್ರಶೇಖರ್, ಗಿರಿಜಾ, ಅಶ್ವಿನಿ, ಅನುಷಾ, ರೆಡ್ ಕ್ರಾಸ್ ಕಾರ್ಯಕರ್ತ ಶಿವಸಾಗರ್, ನೀಲಕಂಠ, ಸುಲೋಚನಾ, ಕೆ. ಚಂದ್ರಶೇಖರ್, ಮಾಬು ಬಾಷಾ, ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.