ಐದು ಯೋಜನೆಗಳು ನಿಲ್ಲಿಸುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ ಭರವಸೆ

Ravi Talawar
ಐದು ಯೋಜನೆಗಳು ನಿಲ್ಲಿಸುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ ಭರವಸೆ
WhatsApp Group Join Now
Telegram Group Join Now

ಬೆಂಗಳೂರು,20: ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೆಂಗಳೂರು ಪ್ರೆಸ್ ಕ್ಲಬ್​ನಲ್ಲಿ ಸಿಎಂ ಮಾಧ್ಯಮ ಸಂವಾದ ನಡೆಸಿದರು.

ಈ ವೇಳೆ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಶಕ್ತಿ ಯೋಜನೆಯಲ್ಲಿ ಈವರೆಗೆ 201 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. 4,857.95 ಕೋಟಿ ರೂ. ಉಚಿತ ಟಿಕೆಟ್ ಮೌಲ್ಯವಾಗಿದೆ. ಅನ್ನ ಭಾಗ್ಯ ಯೋಜನೆಯಡಿ 4.10 ಕೋಟಿ ಫಲಾನುಭವಿಗಳಿಗೆ 5754.6 ಕೋಟಿ ರೂ. ಹಣ ನೀಡಿದ್ದೇವೆ.

ಗೃಹ ಜ್ಯೋತಿಯಡಿ 1.60 ಕೋಟಿ ಜನರಿಗೆ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡಿದ್ದೇವೆ. ಅದಕ್ಕಾಗಿ 7,436 ಕೋಟಿ ರೂ. ವ್ಯಯಿಸಲಾಗಿದೆ. 1.20 ಕೋಟಿ ಯಜಮಾನಿಯರಿಗೆ ಗೃಹಲಕ್ಷ್ಮಿ ಯೋಜನೆ ತಲುಪಿದೆ. ಯುನಿಧಿಯಡಿ 29,587 ಫಲಾನುಭವಿಗಳಿಗೆ ಹಣ ನೀಡಿದ್ದೇವೆ. ಒಟ್ಟಾರೆ ಪಂಚ ಗ್ಯಾರಂಟಿಗೋಸ್ಕರ 2023-24ರಲ್ಲಿ 36,000 ಕೋಟಿ ರೂ. ಖರ್ಚು ಮಾಡಿದ್ದೇವೆ ಎಂದು ತಿಳಿಸಿದರು.

ವಿರೋಧ ಪಕ್ಷದವರು ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆ ನಿಲ್ಲಿಸುತ್ತಾರೆ, ಪ್ರತಿಪಕ್ಷಗಳು ಅಭಿವೃದ್ಧಿ ಕೆಲಸಕ್ಕೆ ದುಡ್ಡಿಲ್ಲ ಎಂದು ಟೀಕೆ ಮಾಡಿದ್ದರು. ಆದರೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ. ಜತೆಗೆ ಯಾವುದೇ ಕಾರಣಕ್ಕೂ ಈ ಐದು ಯೋಜನೆಗಳು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದರು.

54,374 ಕೋಟಿ ರೂ.‌ಬಂಡವಾಳ ವೆಚ್ಚ ಮಾಡುತ್ತೇವೆ ಅಂದಿದ್ದೆವು. ನಾವು ಖರ್ಚು ಮಾಡಿದ್ದು 56,274 ಕೋಟಿ ರೂ. ಆಗಿದೆ. ಆ ಮೂಲಕ ಅಭಿವೃದ್ಧಿ ಕೆಲಸವನ್ನೂ ನಿಲ್ಲಿಸಿಲ್ಲ. ನೀರಾವರಿ ಯೋಜನೆಗೆ ನಾವು ಬಜೆಟ್​ನಲ್ಲಿ 16,371 ಕೋಟಿ ರೂ. ಖರ್ಚು ಮಾಡುವುದಾಗಿ ಹೇಳಿದ್ದೆವು. ಆದರೆ 18,198 ಕೋಟಿ ರೂ. ಖರ್ಚು ಮಾಡಿದ್ದೇವೆ. ಲೋಕೋಪಯೋಗಿ ಇಲಾಖೆಗೆ ಬಜೆಟ್​ನಲ್ಲಿ 9,722 ಕೋಟಿ ನೀಡಿದ್ದೆವು ಅದರಂತೆ 9,641 ಕೋಟಿ ಖರ್ಚು ಮಾಡಿದ್ದೇವೆ. ನಮ್ಮ ಖಜಾನೆ ಖಾಲಿ ಆಗಿದೆ, ಪಾಪರ್ ಆಗುತ್ತಾರೆ ಅಂದಿದ್ರು. ಪಾಪರ್ ಆಗಿದ್ದರೆ ಇಷ್ಟು ಹಣ ಖರ್ಚು ಮಾಡಲು ಆಗುತಿತ್ತಾ ಸಿಎಂ ಎಂದು ಪ್ರಶ್ನಿಸಿದರು.

ನಂತರ ಮೀಸಲಾತಿ ವಿಷಯ ವಿಚಾರ ಪ್ರಸ್ತಾಪಿಸಿದ ಅವರು, ಮುಸ್ಲಿಮರಿಗೆ 2bಯಡಿ 4% ಮೀಸಲಾತಿ ನೀಡಲಾಗುತ್ತಿದೆ. ಚಿನ್ನಪ್ಪ ರೆಡ್ಡಿ ಆಯೋಗದಂತೆ 30 ವರ್ಷಗಳಿಂದ ಈ ಮೀಸಲಾತಿ ಜಾರಿಯಲ್ಲಿದೆ. ಈ ಹಿಂದೆ ಬೊಮ್ಮಾಯಿ ಸರ್ಕಾರ ಮುಸ್ಲಿಂ ‌ಮೀಸಲಾತಿ ರದ್ದು ಮಾಡಿತ್ತು. ಅದರ ವಿರುದ್ಧ ಮುಸ್ಲಿಂರು ಕೋರ್ಟ್​ಗೆ ಹೋಗಿದ್ದರು. ಕೋರ್ಟ್​ನಲ್ಲಿ ಬೊಮ್ಮಾಯಿ ಸರ್ಕಾರ ನಾವು ಇದನ್ನು ಜಾರಿ ಮಾಡಲ್ಲ ಎಂದಿದ್ದರು.

ಮುಸ್ಲಿಂಮರಿಗೆ ಹಿಂದುಳಿದ ವರ್ಗದಿಂದ ಕಿತ್ತು ಮೀಸಲಾತಿ ಕೊಟ್ಟಿದ್ದೇವೆ ಎಂದು ಮೋದಿ ಅವರು ಈತರ ಸುಳ್ಳು ಹೇಳಬಾರದು. ನಾವು ಮತ್ತೊಬ್ಬರ ಹಕ್ಕನ್ನು ಕಿತ್ತುಕೊಳ್ಳುವ ಕೆಲಸ ಮಾಡಿಲ್ಲ. ಮತಕ್ಕೋಸ್ಕರ ಈ ರೀತಿ ಏನು ಬೇಕಾದರು ಹೇಳುವುದಲ್ಲ. 10 ವರ್ಷದಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾರೆ. ಏನಾದರು ಬಡವರ ಪರ ಕೆಲಸ ಮಾಡಿದ್ದೀರಾ ಎಂದು ಸಿಎಂ ಪ್ರಶ್ನಿಸಿದರು.

ಈ ಹಿಂದೆ 40% ಕಮಿಷನ್ ಬಗ್ಗೆ ಬೊಮ್ಮಾಯಿ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಆರೋಪ ಮಾಡಿದ್ದರು. ಎಲ್ಲಾ ತನಿಖೆಗಳನ್ನು ಮಾಡಲು ಆಯೋಗ ರಚನೆ ಮಾಡಿದ್ದೇವೆ. ಸಮಾಜಕ್ಕೆ ಅಂಟಿದ ರೋಗ ಭ್ರಷ್ಟಾಚಾರವಾಗಿದೆ. ಅದನ್ನು ಕಡಿಮೆ ಮಾಡಲು ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎಂದು ತಿಳಿಸಿದರು.

WhatsApp Group Join Now
Telegram Group Join Now
Share This Article