ಬೆಂಗಳೂರು,18: ಬೆಂಗಳೂರಿನಿಂದ ಪುಣೆಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಪ್ರಯಾಣಿಕರೊಬ್ಬರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಭದ್ರತಾ ತಪಾಸಣೆಯ ವೇಳೆ ತಮ್ಮ ಬ್ಯಾಗ್‌ನಲ್ಲಿ ಬಾಂಬ್ ಇರುವುದಾಗಿ ಸುಳ್ಳು ಬೆದರಿಕೆಯನ್ನು ನೀಡಿ ಭೀತಿ ಸೃಷ್ಟಿಸಿದ್ದಕ್ಕಾಗಿ ಬಂಧಿಸಲಾಗಿದೆ.
ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಯಾನ ಸಂಸ್ಥೆಯು ವಿಮಾನ ನಿಲ್ದಾಣದ ಆವರಣದಲ್ಲಿರುವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ರಾಜೇಶ್‌ಕುಮಾರ್ ಬೇನಿವಾಲ್ ವಿರುದ್ಧ ನಾನ್ ಕಾಗ್ನೈಸಬಲ್ ವರದಿ (ಎನ್‌ಸಿಆರ್) ದಾಖಲಿಸಲಾಗಿದೆ.
ಎನ್‌ಸಿಆರ್ ಎಂದರೆ ನ್ಯಾಯಾಲಯವು ನೀಡಿದ ವಾರಂಟ್ ಇಲ್ಲದೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂಬ ದಾಖಲೆಯನ್ನು ಸೂಚಿಸುತ್ತದೆ. ವಿಮಾನ ನಿಲ್ದಾಣದ ಮೂಲಗಳ ಪ್ರಕಾರ, ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಟರ್ಮಿನಲ್ 2 ರಲ್ಲಿ ಕೌಂಟರ್ ಸಂಖ್ಯೆ E9 ಎದುರು ಈ ಘಟನೆ ಸಂಭವಿಸಿದೆ. ಹರಿಯಾಣದ ಹಿಸ್ಸಾರ್ ಜಿಲ್ಲೆಯ ನಿವಾಸಿಯಾದ ಬೇನಿವಾಲ್ ಅವರು ವಿಮಾನ ಸಂಖ್ಯೆ 15 821 ರಲ್ಲಿ ಪ್ರಯಾಣಿಸಲು ನಿರ್ಧರಿಸಿದ್ದು, ರಾತ್ರಿ 11.05 ರ ನಿರ್ಗಮನ ಸಮಯವಾಗಿತ್ತು.
ಬ್ಯಾಗ್‌ಗಳನ್ನು ಪ್ರಯಾಣಿಕರು ಏರ್‌ಲೈನ್‌ನ ಚೆಕ್-ಇನ್ ಕೌಂಟರ್‌ನಲ್ಲಿ ತಪಾಸಣೆಗಾಗಿ ಹಸ್ತಾಂತರಿಸುತ್ತಿದ್ದಾಗ ಪ್ರಯಾಣಿಕ ಬೇನಿವಾಲ್ ತನ್ನ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಗಟ್ಟಿಯಾಗಿ ಹೇಳಿದ್ದಾನೆ. ವಿಮಾನಯಾನ ಸಿಬ್ಬಂದಿ ತಕ್ಷಣವೇ ವಿಮಾನ ನಿಲ್ದಾಣದ ಭದ್ರತಾ ಏಜೆನ್ಸಿಗಳಿಗೆ ಎಚ್ಚರಿಕೆ ನೀಡಿದರು ಎಂದು ಮೂಲಗಳು ತಿಳಿಸಿವೆ.