ಇಂದಿನಿಂದ ಒಂದು ವಾರಗಳ ಕಾಲ ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ

Ravi Talawar
ಇಂದಿನಿಂದ ಒಂದು ವಾರಗಳ ಕಾಲ ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ
WhatsApp Group Join Now
Telegram Group Join Now

ಬೆಂಗಳೂರು,17: ಕಳೆದ ಎರಡು ವಾರಗಳಿಂದ ರಾಜ್ಯದಲ್ಲಿ ಪೂರ್ವ ಮುಂಗಾರು ಶುರುವಾಗಾಗಿದ್ದು, ಇಂದಿನಿಂದ ಒಂದು ವಾರಗಳ ಕಾಲ ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆಗಳಿವೆ. ದಕ್ಷಿಣ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದ್ದು, ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಹೇಳಿದೆ.

ಮುಖ್ಯವಾಗಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಕೊಡಗು, ಮೈಸೂರು, ಹಾಸನ, ತುಮಕೂರು, ಚಿತ್ರದುರ್ಗ, ಮಂಡ್ಯ, ರಾಮನಗರ, ದಾವಣಗೆರೆ, ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಗಳಿವೆ. ಆದ್ದರಿಂದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಪೂರ್ವ ಮುಂಗಾರು ಹೆಚ್ಚು ಚೇತರಿಕೆ ಕಂಡಿದ್ದು, ರಾಜ್ಯಾದ್ಯಂತ ಮಳೆಯಾಗುವ ಮುನ್ಸೂಚನೆಗಳಿವೆ. ಇಂದಿನಿಂದ ಮೇ 21 ರವರೆಗೂ ಮಲೆನಾಡು ಭಾಗದ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಹಾಗೆಯೇ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ರಾಜ್ಯದಲ್ಲಿ ಮೇಲ್ಮೈ ಸುಳಿಗಾಳಿ, ಟ್ರಫ್ ಹಾಗೂ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಮೋಡ ಕವಿದ ವಾತಾವರಣವಿದೆ. ಆಗಾಗ್ಗೆ ಮಳೆಯಾಗುವ ಸಾಧ್ಯತೆಗಳಿವೆ. ನೈರುತ್ಯ ಮುಂಗಾರು ಸಕಾಲಕ್ಕೆ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿದ್ದು, ಬಂಗಾಳಕೊಲ್ಲಿ, ಹಿಂದೂ ಮಹಾಸಾಗರ ಹಾಗೂ ಅರಬ್ಬೀ ಸಮುದ್ರದಲ್ಲಿ ಮಳೆಗೆ ಪೂರಕವಾದ ವಾತಾವರಣಗಳು ನಿರ್ಮಾಣವಾಗುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.

ಇಂದು ಬೆಳಗ್ಗೆ ನಗರದಲ್ಲಿ ಮಳೆ: ಇಂದು ಬೆಳಗಿನ ಜಾವ ರಾಜಧಾನಿ ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ. ವಿಧಾನಸೌಧ, ಕೆ.ಆರ್.ಮಾರುಕಟ್ಟೆ, ಮೆಜೆಸ್ಟಿಕ್, ಶಿವಾಜಿನಗರ, ಬಸವನಗುಡಿ, ಜಯನಗರ, ಬನಶಂಕರಿ ಸೇರಿದಂತೆ ಹಲವು ಬಡಾವಣೆಗಳಲ್ಲಿ ಮಳೆಯಾಗಿದೆ.

WhatsApp Group Join Now
Telegram Group Join Now
Share This Article