ಬೆಂಗಳೂರು,17: ಮುಂದಿನ ವರ್ಷದಿಂದ ಎಸ್ಎಸ್ಎಲ್ಸಿ ಗ್ರೇಸ್ ಮಾರ್ಕ್ ರದ್ದು ಮಾಡುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸಿಎಂ, ಡಿಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ, ಈ ವರ್ಷ ಗ್ರೇಸ್ ಮಾರ್ಕ್ ಕೊಟ್ಟ ವಿಚಾರವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ವಿದ್ಯಾರ್ಥಿಗಳಿಗೆ 20 ಗ್ರೇಸ್ ಮಾರ್ಕ್ಸ್ ನೀಡಿದ್ದೀರಿ. ಯಾವ ಕಾರಣ ಮತ್ತು ಉದ್ದೇಶದಿಂದ ಗ್ರೇಸ್ ಮಾರ್ಕ್ಸ್ ನೀಡಲಾಗಿದೆ. ಗ್ರೇಸ್ ಮಾರ್ಕ್ಸ್ ನೀಡಲು ನಿಮಗೆ ಯಾರು ಹೇಳಿದ್ದು ಎಂದು ತರಾಟೆಗೆ ತೆಗೆದುಕೊಂಡರು.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೇರ್ಗಡೆಗೆ ಕನಿಷ್ಠ ಅಂಕವನ್ನು 35ರಿಂದ 25ಕ್ಕೆ ಶಿಕ್ಷಣ ಇಲಾಖೆ ಇಳಿಸಿತ್ತು. ಆದಾಗ್ಯೂ ಫಲಿತಾಂಶದ ಪ್ರಮಾಣ ಇಳಿಕೆಯಾಗಿರುವುದು ಕಳವಳಕ್ಕೆ ಕಾರಣವಾಗಿದೆ. ಈ ಬಾರಿ 1.70 ಲಕ್ಷ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ನೀಡಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿತ್ತು. ಒಂದು ವೇಳೆ ಗ್ರೇಸ್ ಮಾರ್ಕ್ ನೀಡದಿದ್ದರೆ ಇಷ್ಟೂ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡು ಫಲಿತಾಂಶ ಪ್ರಮಾಣ ಇನ್ನಷ್ಟು ಕುಸಿಯುತ್ತಿತ್ತು ಎನ್ನಲಾಗಿದೆ. ಇನ್ನು ಸರ್ಕಾರ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ರದ್ಧು ಮಾಡಲು ಸೂಚನೆ ನೀಡಿದೆ.