ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಒಂದು ವಾರ ಭಾರೀ ಮಳೆ!

Ravi Talawar
ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಒಂದು ವಾರ ಭಾರೀ ಮಳೆ!
WhatsApp Group Join Now
Telegram Group Join Now

ನವದೆಹಲಿ,16: ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್, ಕೇರಳ ಮತ್ತು ಮಾಹೆ, ಕರಾವಳಿ ಮತ್ತು ದಕ್ಷಿಣ ಒಳ ಕರ್ನಾಟಕದಲ್ಲಿ ಮೇ 16ರಿಂದ ಮೇ 19 ಮತ್ತು ಮೇ 16 ರಂದು ಉತ್ತರ ಒಳನಾಡಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.

ಕೆಲ ದಿನಗಳಿಂದ ವಿವಿಧ ರಾಜ್ಯದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಇಂದು ಕೂಡ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಭಾರತದ ಬಹುತೇಕ ಭಾಗಗಳು ಕಳೆದ ಹಲವು ವಾರಗಳಿಂದ ತೀವ್ರ ಶಾಖ ಮತ್ತು ನೀರಿನ ಸಮಸ್ಯೆಯಿಂದ ಹೈರಾಣಾಗಿತ್ತು. ಇದೀಗ ಮಳೆಯಿಂದ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಇನ್ನೂ ಕರ್ನಾಟಕದಲ್ಲೂ ಹೆಚ್ಚು ಮಳೆಯಾಗುತ್ತಿದ್ದು, ರೈತರು ಸಂತಸದಲ್ಲಿದ್ದಾರೆ. ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್ ಘೋ‍ಷಣೆಯಾಗಿದೆ. ಇಲ್ಲಿ ಮಳೆಯ ತೀವ್ರತೆ ಮತ್ತು ಗುಡುಗು ಮಿಂಚು ಭಾರಿ ಗಾಳಿ ಬೀಸುವ ಸಾಧ್ಯತೆ ಇರುವ ಕಾರಣ ಯೆಲ್ಲೋ ಅಲರ್ಟ್ ಅನ್ನು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರ ಘೋಷಿಸಿದೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಈ ವರ್ಷ ಸಮಯಕ್ಕಿಂತ ಮುಂಚಿತವಾಗಿಯೇ ಮುಂಗಾರಿನ ಆಗಮನವಾಗಲಿದೆ. ನೈಋತ್ಯ ಮುಂಗಾರು ಮೇ 31ಕ್ಕೆ ಕೇರಳ ತಲುಪುವ ನಿರೀಕ್ಷೆಯಿದೆ. ಇದಕ್ಕೂ ಮುನ್ನ ಮೇ 19ರಂದು ಅಂಡಮಾನ್ ನಿಕೋಬಾರ್ ತಲುಪುವ ಸಾಧ್ಯತೆಯಿದೆ. ನಂತರ ದೇಶದ ಇತರ ಭಾಗಗಳತ್ತ ಸಾಗಲಿದೆ.

ಈ ಕುರಿತು ಬುಧವಾರ ರಾತ್ರಿ ಮಾಹಿತಿ ನೀಡಿರುವ ಇಲಾಖೆ, ಇದೇ 31ಕ್ಕೆ ಕೇರಳ ರಾಜ್ಯವನ್ನು ಮುಂಗಾರು ಪ್ರವೇಶಿಸಲಿದ್ದು, ನಾಲ್ಕು ದಿನ ಹೆಚ್ಚೂ ಕಡಿಮೆ ಆಗಬಹುದು. ಆದರೆ ಈ ಬಾರಿಯ ನಾಲ್ಕು ತಿಂಗಳ ಮಳೆಗಾಲ ಕೃಷಿ ಆಧಾರಿತ ಭಾರತದ ಆರ್ಥಿಕತೆಗೆ ಚೈತನ್ಯ ನೀಡಲಿದೆ ಎಂದು ಹೇಳಿದೆ.

ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ಪ್ರತಿಕ್ರಿಯಿಸಿ, “ಕೇರಳದಲ್ಲಿ ಮಾನ್ಸೂನ್ ಪ್ರಾರಂಭವಾಗುವ ಸಾಮಾನ್ಯ ದಿನಾಂಕ ಜೂನ್ 1 ಆಗಿರುವುದರಿಂದ ಇದು ಆ ದಿನಕ್ಕೆ ಹತ್ತಿರವಾಗಿದೆ. ಅಲ್ಲದೇ ಈ ಬಾರಿ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ದಾಖಲಾಗಬಹುದು ಎಂದು ಕಳೆದ ತಿಂಗಳು ನಮ್ಮ ಇಲಾಖೆ ಹೇಳಿತ್ತು. ಅದಕ್ಕೆ ಪೂರಕವಾಗಿ ಮುಂಗಾರು ಚಲನೆ ಕಂಡುಬಂದಿದೆ” ಎಂದು ತಿಳಿಸಿದ್ದಾರೆ.

ಕೇರಳದಲ್ಲಿ ಮುಂಗಾರು ಪ್ರವೇಶದ ಸಮಯವು ಕಳೆದ 150 ವರ್ಷಗಳಿಂದ ಬದಲಾಗುತ್ತಿದೆ. 1918ರಲ್ಲಿ ಮುಂಗಾರು ಮೇ 11ರಂದು ರಾಜ್ಯ ಪ್ರವೇಶಿಸಿತ್ತು. ನಂತರದಲ್ಲಿ 1972 ಜೂನ್ 18, 2020ರ ಜೂನ್ 1, 2021ರ ಜೂನ್ 3, 2022ರಲ್ಲಿ ಮೇ 29, ಕಳೆದ ವರ್ಷ ಜೂನ್ 8ರಂದು ಮುಂಗಾರು ಮಳೆಯ ಪ್ರವೇಶವಾಗಿತ್ತು. ಈ ಬಾರಿ ಮುಂಚಿತವಾಗಿಯೇ ಮುಂಗಾರಿನ ಆಗಮನದಿಂದ ಈ ವರ್ಷ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ. ದೀರ್ಘಾವಧಿಯ ಸರಾಸರಿಗೆ ಹೋಲಿಸಿದರೆ ಈ ಋತುವಿನಲ್ಲಿ ಹೆಚ್ಚಿನ ಮಳೆಯನ್ನು ಭಾರತ ದಾಖಲಿಸುವ ಸಾಧ್ಯತೆ ಇದೆ. ವಾಯುವ್ಯ, ಪೂರ್ವ ಮತ್ತು ಈಶಾನ್ಯ ರಾಜ್ಯಗಳ ಕೆಲವು ಭಾಗಗಳನ್ನು ಹೊರತುಪಡಿಸಿ ದೇಶದ ಬಹುತೇಕ ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದೆ.

 

 

 

WhatsApp Group Join Now
Telegram Group Join Now
Share This Article