ಕೊಲ್ಕತ್ತಾ: 2019ರಲ್ಲಿ ಆರ್ಟಿಕಲ್ 370 ರದ್ದುಗೊಳಿಸಿದ ನಂತರ ಒಂದು ಕಾಲದಲ್ಲಿ ತೊಂದರೆಗೆ ಒಳಗಾಗಿದ್ದ ಕಾಶ್ಮೀರದಲ್ಲಿ ಈಗ ಶಾಂತಿ ಮರಳಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆಜಾದಿ ಘೋಷಣೆಗಳೊಂದಿಗೆ ಪ್ರತಿಭಟನೆಗಳು ಪ್ರತಿಧ್ವನಿಸುತ್ತಿವೆ. ಪಿಒಕೆ ಭಾರತದ ಭಾಗವಾಗಿದ್ದು ಅದನ್ನು ಮರಳಿ ಪಡೆಯುತ್ತೇವೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಸೆರಾಂಪೋರ್ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಿಒಕೆ ಸ್ವಾಧೀನಪಡಿಸಿಕೊಳ್ಳುವ ಬೇಡಿಕೆಯನ್ನು ಬೆಂಬಲಿಸದ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ಮಣಿಶಂಕರ್ ಅಯ್ಯರ್ ಅವರಂತಹ ಕಾಂಗ್ರೆಸ್ ನಾಯಕರು ಅವರ ಬಳಿ ಅಣುಬಾಂಬ್ ಇರುವುದರಿಂದ ನಾವು ಇದನ್ನು ಮಾಡಬಾರದು ಎಂದು ಹೇಳುತ್ತಾರೆ. ಆದ್ರೆ ನಾನು ಹೇಳುತ್ತೇನೆ ಈ ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಭಾಗವಾಗಿದೆ ನಾವು ಅದನ್ನು ತೆಗೆದುಕೊಳ್ಳುತ್ತೇವೆ ಎಂದು ಗುಡುಗಿದ್ದಾರೆ.
ಪ್ರಸ್ತುತ ಲೋಕಸಭೆ ಚುನಾವಣೆಯು ಭಾರತದ ಮೈತ್ರಿಕೂಟದ ಭ್ರಷ್ಟ ನಾಯಕರು ಮತ್ತು ಪ್ರಾಮಾಣಿಕ ರಾಜಕಾರಣಿ ನರೇಂದ್ರ ಮೋದಿ ಅವರ ನಡುವಿನ ಆಯ್ಕೆಯಾಗಿದೆ. ಅವರು ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಿದ್ದರೂ ಸಹ ತಮ್ಮ ವಿರುದ್ಧ ಒಂದು ಪೈಸೆಯ ಭ್ರಷ್ಟಚಾರದ ಆರೋಪವನ್ನು ಹೊಂದಿಲ್ಲ. ಆದ್ದರಿಂದ ಬಂಗಾಳವು ನುಸುಳುಕೋರರು ಬೇಕೇ ಅಥವಾ ನಿರಾಶ್ರಿತರಿಗೆ ಸಿಎಎ ಬೇಕೇ? ಎಂಬುದನ್ನು ನಿರ್ಧರಿಸಬೇಕು. ಬಂಗಾಳವು ಜಿಹಾದ್ಗೆ ಮತ ಹಾಕಬೇಕೇ ಅಥವಾ ವಿಕಾಸ್ಗೆ ಮತ ಹಾಕಬೇಕೆ? ಎಂದು ನಿರ್ಧರಿಸಬೇಕು ಎಂದು ಕರೆ ನೀಡಿದ್ದಾರೆ.