SSLC ಟಾಪರ್ ಅಂಕಿತಾಗೆ 5 ಲಕ್ಷ, 3ನೇ ಸ್ಥಾನ ಪಡೆದ ನವನೀತ್​ಗೆ 2 ಲಕ್ಷ ರೂ. ಉಡುಗೊರೆ ನೀಡಿದ ಡಿಸಿಎಂ

Ravi Talawar
SSLC ಟಾಪರ್ ಅಂಕಿತಾಗೆ 5 ಲಕ್ಷ, 3ನೇ ಸ್ಥಾನ ಪಡೆದ ನವನೀತ್​ಗೆ 2 ಲಕ್ಷ ರೂ. ಉಡುಗೊರೆ ನೀಡಿದ ಡಿಸಿಎಂ
WhatsApp Group Join Now
Telegram Group Join Now

ಬೆಂಗಳೂರು: ಸರ್ಕಾರಿ ಶಾಲೆಯಲ್ಲಿ ಓದಿ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಮೊದಲ ರಾಂಕ್ ಪಡೆದ ಬಾಗಲಕೋಟೆ ಜಿಲ್ಲೆಯ ಮುಧೋಳದ ಅಂಕಿತಾಗೆ 5 ಲಕ್ಷ ರೂ. ನೀಡಿ ಹಾಗೂ 3ನೇ ಸ್ಥಾನ ಪಡೆದ ಮಂಡ್ಯದ ನವನೀತ್​ಗೆ 2 ಲಕ್ಷ ರೂ. ಪ್ರೋತ್ಸಾಹ ಧನ ಘೋಷಿಸುವ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.

ಡಿಸಿಎಂ ಅವರ ಆಹ್ವಾನದ ಮೇರೆಗೆ ಅಂಕಿತಾ, ಆಕೆಯ ಪೋಷಕರು ಮತ್ತು ಶಾಲೆಯವರು, ನವನೀತ್ ಅವರ ಕುಟುಂಬದವರು ಸದಾಶಿವನಗರ ನಿವಾಸಕ್ಕೆ ಮಂಗಳವಾರ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿ 3ನೇ ರಾಂಕ್ ಗಳಿಸಿರುವ ಮಂಡ್ಯದ ನವನೀತ್ ಕೂಡ ಆಗಮಿಸಿದ್ದರು. ಡಿ.ಕೆ.ಶಿವಕುಮಾರ್ ಅವರು ಇಬ್ಬರೂ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅಂಕಿತಾ ಅವರಿಗೆ 5 ಲಕ್ಷ ರೂ. ಚೆಕ್ ನೀಡಿದರು. ನವನೀತ್​ಗೆ 2 ಲಕ್ಷ ರೂ. ಉಡುಗೊರೆ ಪ್ರಕಟಿಸಿ ಚೆಕ್ ನೀಡುವಂತೆ ಕಚೇರಿ ಸಿಬ್ಬಂದಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಅವರು, ಮೊನ್ನೆ 10ನೇ ತರಗತಿ ಫಲಿತಾಂಶ ನೋಡಿದಾಗ, ಬಾಗಲಕೋಟೆಯ ಬಸವರಾಜು ಅವರ ಪುತ್ರಿ ಅಂಕಿತಾ 625ಕ್ಕೆ 625 ಅಂಕಗಳನ್ನು ಪಡೆದಿರುವುದನ್ನು ಕಂಡು ಸಂತೋಷವಾಯಿತು, ಬಹಳ ಹೆಮ್ಮೆ ಎನಿಸಿತು. ನಮ್ಮ ಸರ್ಕಾರಿ ಶಾಲೆ ಮಕ್ಕಳು ಹಾಗೂ ಅಲ್ಲಿನ ಶಿಕ್ಷಕರು ಬಹಳ ಸಮರ್ಥರಿದ್ದಾರೆ. ಅಂಕಿತಾ ಜತೆ ನಾನು ದೂರವಾಣಿ ಕರೆ ಮೂಲಕ ಮಾತನಾಡಿ ಬೆಂಗಳೂರಿಗೆ ಬಂದಾಗ ನನ್ನ ಮನೆಗೆ ಬರುವಂತೆ ಆಹ್ವಾನಿಸಿದ್ದೆ. ಅವರು ಇಂದು ಆಗಮಿಸಿದ್ದಾರೆ. ಸರ್ಕಾರದ ಪರವಾಗಿ ನಾನು ಈ ಹೆಣ್ಣುಮಗಳು ಹಾಗೂ ಆಕೆಯ ಪೋಷಕರನ್ನು ಅಭಿನಂದಿಸುತ್ತೇನೆ ಎಂದರು.

ಇವರ ಮುಂದಿನ ವಿದ್ಯಾಭ್ಯಾಸಕ್ಕೆ 5 ಲಕ್ಷ ರೂ. ಹಣ ಉಡುಗೊರೆಯಾಗಿ ನೀಡುತ್ತಿದ್ದೇನೆ. ಇನ್ನು ಮಂಡ್ಯದ ನವನೀತ್ ಕೂಡ ಸರ್ಕಾರಿ ಶಾಲೆಯಲ್ಲಿ ಓದಿ ಮೂರನೇ ಸ್ಥಾನ ಪಡೆದಿದ್ದು, ಈತನಿಗೆ 2 ಲಕ್ಷ ಉಡುಗೊರೆಯಾಗಿ ನೀಡುತ್ತಿದ್ದೇನೆ. ಇವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.

WhatsApp Group Join Now
Telegram Group Join Now
Share This Article