ಬೆಂಗಳೂರು,14: ಸಂಸದ ಪ್ರಜ್ವಲ್ ರೇವಣ್ಣ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎನ್ನಲಾಗಿರುವ ಅಶ್ಲೀಲ ವಿಡಿಯೋದಲ್ಲಿದ್ದ ಸಂತ್ರಸ್ತೆಯನ್ನು ಅಪಹರಿಸಿದ ಆರೋಪದ ಮೇಲೆ ಎಸ್ ಐಟಿ ಅಧಿಕಾರಿಗಳಿಂದ ಜೈಲುಪಾಲಾಗಿದ್ದ ಮಾಜಿ ಸಚಿವ ಹೆಚ್ಡಿ ರೇವಣ್ಣ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಆಗಿದ್ದು, ಇಂದು ಮಂಗಳವಾರ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಹೆಚ್ಡಿ ರೇವಣ್ಣ ಅವರು ಬಿಡುಗಡೆಯಾಗುತ್ತಿದ್ದಂತೆ, ಅವರ ಅಭಿಮಾನಿಗಳು ಜಯ ಘೋಷಣೆ ಹಾಕಿ ಸಂಭ್ರಮಿಸಿದರು. ಕಾರಾಗೃಹದ ಮುಂದೆ ಸೇರಿದ್ದ ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದರು. ಈ ವೇಳೆ ಗೊಂದಲ ವಾತಾವರಣ ಉಂಟಾಯಿತು.
ಮೇ 4ರಂದು ತಮ್ಮ ತಂದೆ ಹೆಚ್ ಡಿ ದೇವೇಗೌಡರ ನಿವಾಸದಲ್ಲಿಯೇ ಎಸ್ ಐಟಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ ರೇವಣ್ಣ ಇಂದು ಜೈಲಿಂದ ಹೊರಬಂದು ನೇರವಾಗಿ ದೇವೇಗೌಡರ ನಿವಾಸಕ್ಕೆ ಆಗಮಿಸಿ ತಂದೆ-ತಾಯಿ ಆಶೀರ್ವಾದ ಪಡೆದರು.
ರೇವಣ್ಣ ಅವರಿಗೆ ಜಾಮೀನು ಸಿಕ್ಕಿರುವ ಬಗ್ಗೆ ಅವರ ಸೋದರ ಜೆಡಿಎಸ್ ಅಧ್ಯಕ್ಷ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಲ್ಲಿ ನಡೆದಿರುವ ಅತ್ಯಂತ ಹೀನಾಯ ಘಟನೆಯಿದು. ರೇವಣ್ಣಗೆ ಜಾಮೀನು ಸಿಕ್ಕಿದೆ ಎಂದು ಸಂಭ್ರಮ ಪಡುವುದು ಬೇಡ. ನಾನು ಸಂತೋಷಪಡುತ್ತೇನೆ ಎಂದು ಭಾವಿಸಬೇಡಿ. ಕಾರ್ಯಕರ್ತರು ಸಂಭ್ರಮಿಸುವ ಸಮಯ ಇದಲ್ಲ. ಇದು ರಾಜ್ಯವೇ ತಲೆ ತಗ್ಗಿಸುವ ಘಟನೆ ಎಂದು ಹೇಳಿದ್ದಾರೆ.