ಮಹಾರಾಷ್ಟ್ರದಲ್ಲಿ ಕೋವಿಡ್​ ಹೊಸ ರೂಪಾಂತರಿ ಪತ್ತೆ: 91 ಮಂದಿಯಲ್ಲಿ ಸೋಂಕು​ ದೃಢ

Ravi Talawar
ಮಹಾರಾಷ್ಟ್ರದಲ್ಲಿ ಕೋವಿಡ್​ ಹೊಸ ರೂಪಾಂತರಿ ಪತ್ತೆ: 91 ಮಂದಿಯಲ್ಲಿ ಸೋಂಕು​ ದೃಢ
WhatsApp Group Join Now
Telegram Group Join Now

ನವದೆಹಲಿ: ಅಮೆರಿಕದಲ್ಲಿ ವೇಗವಾಗಿ ಹರಡುತ್ತಿರುವ ಹೊಸ ಕೋವಿಡ್ 19 ರೂಪಾಂತರಿ ‘ಎಫ್ಎಲ್ಐಆರ್​ಟಿ’ (FLiRT- ಫ್ಲರ್ಟ್​) ಪ್ರಕರಣ ಇದೀಗ ಮಹಾರಾಷ್ಟ್ರದಲ್ಲೂ ಪತ್ತೆಯಾಗಿದೆ. ಆದರೆ, ಈ ಸೋಂಕಿನ ಬಗ್ಗೆ ತಕ್ಷಣಕ್ಕೆ ಹೆಚ್ಚು ಆತಂಕಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಫ್ಲರ್ಟ್​ ಎಂದು ಕರೆಯಲ್ಪಡುತ್ತಿರುವ ಈ ಸೋಂಕು ಕೆಪಿ.1.1 ಮತ್ತು ಕೆಪಿ.2 ತಳಿಗಳ ರೂಪಾಂತರ ಒಳಗೊಂಡಿದೆ. ಈ ತಳಿಗಳ ರೂಪಾಂತರಗಳ ತಾಂತ್ರಿಕ ಹೆಸರುಗಳ ಆಧಾರದ ಮೇಲೆ ಅವುಗಳನ್ನು ಹೆಸರಿಸಲಾಗಿದೆ. ಒಂದು ರೂಪಾಂತರ ಎಫ್​ ಮತ್ತು ಎಲ್ ಅಕ್ಷರ​ ಒಳಗೊಂಡಿದ್ದರೆ, ಮತ್ತೊಂದು ರೂಪಾಂತರ ಆರ್​ ಮತ್ತು ಟಿ ಅಕ್ಷರ ಹೊಂದಿದೆ.

ಮಾರ್ಚ್​ ಮತ್ತು ಏಪ್ರಿಲ್​ನಲ್ಲಿ ಸಂಗ್ರಹಿಸಲಾದ ಜಿನೋಮ್​ ಸೀಕ್ವೆನ್ಸಿಂಗ್​ನಲ್ಲಿ ಕೆಪಿ.2ನ 91 ಪ್ರಕರಣಗಳು ಮಹಾರಾಷ್ಟ್ರದಲ್ಲಿ ಕಂಡುಬಂದಿವೆ. ಇದರಲ್ಲಿ ಪುಣೆಯಲ್ಲಿ 51, ಥಾಣೆ 20, ಅಮರಾವತಿ 7, ಔರಂಗಬಾದ್​ 7, ಸೋಲಪುರ್ 2, ಅಹಮದ್​​ನಗರ 1, ನಾಸಿಕ್ 1, ಲಾತೂರ್​ 1 ಮತ್ತು ಸಾಂಗ್ಲಿಯಲ್ಲಿ 1 ಪ್ರಕರಣ ಪತ್ತೆಯಾಗಿದೆ. ಆದರೆ, ಯಾವುದೇ ಪ್ರಕರಣದಲ್ಲೂ ಆಸ್ಪತ್ರೆಗೆ ದಾಖಲಾಗುವ ಅಥವಾ ತೀವ್ರತರದ ಕಾಯಿಲೆ ವರದಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಆತಂಕ ಬೇಕಿಲ್ಲ ಎಂದು ಸೋಂಕು ರೋಗ ತಜ್ಞ ಡಾ.ಈಶ್ವರ್​ ಗಿಲಡಾ ತಿಳಿಸಿದ್ದಾರೆ.

ಅಷ್ಟೇ ಅಲ್ಲದೇ, ಪಾಸಿಟಿವ್​ ದರ ಕೂಡ ಕೇವಲ ಶೇ.1ರಷ್ಟಿದೆ. ಸದ್ಯ ರಾಜ್ಯದಲ್ಲಿ ಕೋವಿಡ್​ ಸೋಂಕಿನ ಪ್ರಮುಖ ತಳಿ ಕೆಪಿ.2 ಆಗಿದೆ. ಆದಾಗ್ಯೂ ಈ ತಳಿ ಸೋಂಕಿತರ ಆಸ್ಪತ್ರೆ ದಾಖಲೀಕರಣ ಅಥವಾ ತೀವ್ರತರದ ಪ್ರಕರಣಗಳು ವರದಿಯಾಗಿಲ್ಲ ಎಂದು ಪ್ರಮುಖ ಆಂಗ್ಲ ಮಾಧ್ಯಮ ವರದಿ ಮಾಡಿದೆ.

ಓಮಿಕ್ರಾನ್​ ವಂಶಾವಳಿಯ ಹೆಚ್ಚು ಹರಡುವ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ರೂಪಾಂತರ ಸೋಂಕು ಇದಾಗಿದೆ. ಫ್ಲರ್ಟ್​ ಮೊದಲ ಬಾರಿಗೆ ಜನವರಿಯಲ್ಲಿ ಜಾಗತಿಕವಾಗಿ ಪತ್ತೆಯಾಗಿತ್ತು. ಓಮ್ರಿಕಾನ್​ ಮೂಲ ಕೆಪಿ.2 ತಳಿ. ಅಮೆರಿಕದ ರೋಗ ನಿಯಂತ್ರಣ ತಡೆಗಟ್ಟುವಿಕೆ ಕೇಂದ್ರದ ಪ್ರಕಾರ, ಏಪ್ರಿಲ್​ ಕೊನೆ ವಾರದಲ್ಲಿ ದೇಶದಲ್ಲಿ ಕೆಪಿ.2 ಅನುಕ್ರಮ ಪ್ರಸರಣದ ಪಾಲು ಶೇ 25ರಷ್ಟು ಇರಲಿದೆ.

ಲಕ್ಷಣಗಳು: ಈ ತಳಿ ಕೂಡ ಈ ಹಿಂದೆ ಕೋವಿಡ್​ ತಳಿಗಳು ಹೊಂದಿದ್ದಂತಹ ಮೂಗು ಸೋರುವಿಕೆ, ಗಂಟಲು ಕೆರೆತ, ಸುಸ್ತು, ಜ್ವರ, ತಲೆನೋವು, ಸ್ನಾಯು ನೋವು, ಕೆಲವು ಬಾರಿ ರುಚಿ ಅಥವಾ ವಾಸನೆ ನಷ್ಟದ ಲಕ್ಷಣಗಳನ್ನು ಹೊಂದಿದೆ.

ಕೋವಿಡ್​ ಸಂಪೂರ್ಣವಾಗಿ ಸಮಾಜದಿಂದ ಹೋಗಿಲ್ಲ. ಆದರೆ, ಇದು ಹೆಚ್ಚು ಆತಂಕ ಸೃಷ್ಟಿಸುತ್ತಿಲ್ಲ. ಆಸ್ಪತ್ರೆ ದಾಖಲೀಕರಣ ಮತ್ತು ಸಾವಿಗೆ ಕಾರಣವಾಗುತ್ತಿಲ್ಲ. ‘ಸೌಮ್ಯ ಸ್ವಭಾವ’ದ ಜ್ವರದಂತೆ ಇದೆ. ಇದನ್ನು ಪ್ರತ್ಯೇಕ ರೋಗ ಎಂದು ಪರಿಗಣಿಸಲಾಗದು. ಇದನ್ನು ‘ಕೋವಿ-ಜ್ವರ’ ಎಂದು ಕರೆಯಬಹುದಾಗಿದೆ ಎಂದು ಮುಂಬೈನ ಇನ್ಫೆಕ್ಷಸ್​​ ಡೀಸಿಸ್​ ಯುನಿಸೊನ್​ ಮೆಡಿಕೇರ್​ ಆ್ಯಂಡ್​ ರಿಸರ್ಚ್‌ನ ಸಮಲೋಚಕರಾದ ಡಾ.ಗಿಲಡಾ ಮಾಹಿತಿ ನೀಡಿದರು.

WhatsApp Group Join Now
Telegram Group Join Now
Share This Article