ಭೋಪಾಲ್: ಲೋಕಸಭಾ ಚುನಾವಣೆ ಮತದಾನದ ಸಂದರ್ಭದಲ್ಲಿ ಕಾಂಗ್ರೆಸ್ ಒಂದರ ಹಿಂದೆ ಮತ್ತೊಂದು ಎಡವಟ್ಟು ಮಾಡಿಕೊಳ್ಳುತ್ತಿದೆ. ಸ್ಯಾಮ್ ಪಿತ್ರೋಡಾ ಡೆತ್ ಟ್ಯಾಕ್ಸ್ ಹಾಗೂ ಜನಾಂಗೀಯ ನಿಂದನೆಗಳ ಹೇಳಿಕೆ ಈಗಾಗಲೇ ಕಾಂಗ್ರೆಸ್ ನ್ನು ತೀವ್ರ ಮುಜುಗರಕ್ಕೊಳಪಡಿಸಿದ್ದು, ಈಗ ಗ್ಯಾರೆಂಟಿ ವಿಷಯದಲ್ಲಿ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಗೃಹ ಲಕ್ಷ್ಮಿ ಹೆಸರಿನ ಗ್ಯಾರೆಂಟಿ ಯೋಜನೆ ಜನಪ್ರಿಯತೆಯನ್ನು ಗಮನಿಸಿ ದೇಶಾದ್ಯಂತ ಇದೇ ಮಾದರಿಯ ಘೋಷಣೆ ಮಾಡಿದ್ದು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಮಹಿಳೆಯರಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ನೀಡುವ ಭರವಸೆ ನೀಡಿದೆ.
ಈ ಗ್ಯಾರೆಂಟಿ ಭರವಸೆಯ ವಿಷಯವಾಗಿ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಕಾಂತಿಲಾಲ್ ಭೂರಿಯಾ, ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಇಬ್ಬರು ಪತ್ನಿಯರಿರುವ ವ್ಯಕ್ತಿಗೆ ವಾರ್ಷಿಕ 2 ಲಕ್ಷ ರೂಪಾಯಿ (ಒಬ್ಬ ಮಹಿಳೆಗೆ ವಾರ್ಷಿಕ ತಲಾ 1 ಲಕ್ಷ) ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ
ರತ್ಲಾಮ್ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿರುವ ಕಾಂತಿಲಾಲ್ ಭೂರಿಯಾ, ಕಾಂಗ್ರೆಸ್ ನ ಮಹಾಲಕ್ಷ್ಮಿ ಯೋಜನೆ (ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂಪಾಯಿ ನೀಡುವ ಯೋಜನೆ) ಬಗ್ಗೆ ಮಾತನಾಡುತ್ತಿದ್ದರು. “ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಪ್ರತಿ ಮಹಿಳೆಯ ಬ್ಯಾಂಕ್ ಖಾತೆಯಲ್ಲಿ 1 ಲಕ್ಷ ರೂಪಾಯಿ ಜಮೆಯಾಗಲಿದೆ. ಒಂದು ವೇಳೆ ವ್ಯಕ್ತಿಯೊಬ್ಬರಿಗೆ ಇಬ್ಬರು ಪತ್ನಿಯರಿದ್ದರೆ, ಆ ಕುಟುಂಬಕ್ಕೆ 2 ಲಕ್ಷ ರೂಪಾಯಿ ಸಿಗಲಿದೆ ಎಂದು ಭೂರಿಯಾ ಹೇಳಿದ್ದಾರೆ.
ಈ ಭರವಸೆಯ ಮೂಲಕ, ಭೂರಿಯಾ ಪ್ರಜ್ಞಾಪೂರ್ವಕವಾಗಿ ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಹೊಂದಿರುವ ಬುಡಕಟ್ಟು ಜನಾಂಗದವರನ್ನು ಗುರಿಯಾಗಿಸಿ ಮತ ಕೇಳಿದ್ದಾರೆ. ಈ ಪ್ರದೇಶದಲ್ಲಿ ಭಿಲ್ ಮತ್ತು ಭಿಲಾಲ ಬುಡಕಟ್ಟುಗಳಲ್ಲಿ ಬಹುಪತ್ನಿತ್ವವು ವ್ಯಾಪಕವಾಗಿದೆ.
ಭೂರಿಯಾ ಹೇಳಿಕೆಗೆ ಆಡಳಿತಾರೂಢ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದ್ದು, ಚುನಾವಣಾ ಆಯೋಗ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. ರ್ಯಾಲಿಯಲ್ಲಿ ಉಪಸ್ಥಿತರಿದ್ದ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಜಿತು ಪಟ್ವಾರಿ ಅವರು ಭುರಿಯಾ ಅವರ ಅಸಾಮಾನ್ಯ ಭರವಸೆಗೆ ಸಂತಸ ವ್ಯಕ್ತಪಡಿಸಿದ್ದಾರೆ.

 
		 
		 
		
