ಇಸ್ಲಾಮಾಬಾದ್,09: ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗ್ವಾದರ್‌ನಲ್ಲಿ ಉಗ್ರ ದಾಳಿ ನಡೆದಿದ್ದು 7 ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಗ್ವಾದರ್‌ನ ಸರಬಂದ್‌ನಲ್ಲಿರುವ ಫಿಶ್ ಹಾರ್ಬರ್ ಜೆಟ್ಟಿ ಬಳಿಯ ವಸತಿ ಕ್ವಾರ್ಟರ್ಸ್ಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಮಲಗಿದ್ದ ಏಳು ಮಂದಿ ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ.
ಇತ್ತೀಚೆಗೆ ಸೆಂಟರ್ ಫಾರ್ ರಿಸರ್ಚ್ ಅಂಡ್ ಸೆಕ್ಯುರಿಟಿ ಸ್ಟಡೀಸ್ ವಾರ್ಷಿಕ ಭದ್ರತಾ ವರದಿಯನ್ನು ಬಿಡುಗಡೆ ಮಾಡಲಾಗಿದೆ.
ಈ ವರದಿಯ ಪ್ರಕಾರ, 2023 ರಲ್ಲಿ ಪಾಕಿಸ್ತಾನದಲ್ಲಿ 789 ಭಯೋತ್ಪಾದಕ ದಾಳಿಗಳು ನಡೆದಿವೆ. ಈ ದಾಳಿಯಲ್ಲಿ 1,524 ಜನರು ಸಾವನ್ನಪ್ಪಿದ್ದಾರೆ ಮತ್ತು 1,463 ಜನರು ಗಾಯಗೊಂಡಿದ್ದಾರೆ. ಇದು ಕಳೆದ ಆರು ವರ್ಷಗಳಲ್ಲೇ ಅತ್ಯಧಿಕ ದಾಖಲೆಯಾಗಿದೆ.
ಈ ಹಿಂದೆ ಮಾರ್ಚ್ 20 ರಂದು ಪಾಕಿಸ್ತಾನದ ಬಲೂಚಿಸ್ತಾನದ ಗ್ವಾದರ್ ಬಂದರಿನ ಮೇಲೆ ಉಗ್ರರು ದಾಳಿ ನಡೆಸಿರುವ ಸುದ್ದಿ ಬೆಳಕಿಗೆ ಬಂದಿತ್ತು . ಎಂಟು ಶಸ್ತ್ರಸಜ್ಜಿತ ಭಯೋತ್ಪಾದಕರು ಗ್ವಾದರ್ ಬಂದರಿನ ಸಂಕೀರ್ಣಕ್ಕೆ ಪ್ರವೇಶಿಸಿದ್ದರು ಎಂದು ಹೇಳಲಾಗಿದೆ. ಇದಾದ ನಂತರ ಸ್ಥಳದಲ್ಲೇ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಗಳು ಸಂಭವಿಸಿದ್ದವು.
ನಿಷೇಧಿತ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಈ ದಾಳಿ ನಡೆಸಿದೆ ಎಂದು ಮಕ್ರನ್ ವಿಭಾಗದ ಕಮಿಷನರ್ ಸಯೀದ್ ಅಹ್ಮದ್ ಉಮ್ರಾನಿ ಹೇಳಿದ್ದಾರೆ. ದಾಳಿಯಲ್ಲಿ ಯಾವುದೇ ಸ್ಥಳೀಯರು ಗಾಯಗೊಂಡಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.ಪ್ರ ತೀಕಾರವಾಗಿ ಏಳು ಮಂದಿ ದಾಳಿಕೋರರನ್ನು ಕೊಲ್ಲಲಾಯಿತು ಮತ್ತು ಇದರ ನಂತರ ಗುಂಡಿನ ದಾಳಿಯನ್ನು ನಿಲ್ಲಿಸಲಾಯಿತು ಎಂದು ಗ್ವಾದರ್ ಹಿರಿಯ ಪೊಲೀಸ್ ಅಧೀಕ್ಷಕ ಜೊಹೈಬ್ ಮೊಹ್ಸಿನ್ ಮಾಧ್ಯಮಗಳಿಗೆ ತಿಳಿಸಿದ್ದರು.
ಬಲೂಚಿಸ್ತಾನದ ಮುಖ್ಯಮಂತ್ರಿ ಮಿರ್ ಸರ್ಫ್ರಾಜ್ ಬುಗ್ತಿ ಅವರು ಗ್ವಾದರ್‌ನಲ್ಲಿ ನಡೆದ ದಾಳಿಯನ್ನು ಖಂಡಿಸಿದರು ಮತ್ತು ಅದನ್ನು ಮುಕ್ತ ಭಯೋತ್ಪಾದನೆ ಎಂದು ಕರೆದಿದ್ದಾರೆ. ದುಷ್ಕರ್ಮಿಗಳನ್ನು ಬಿಡಲಾಗುವುದಿಲ್ಲ ಮತ್ತು ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.