ಬೆಳಗಾವಿ 08: ಇಂದು ವಿಶ್ವದಲ್ಲೆಡೆ ಸಂಭ್ರಮದಿAದ ಬಸವಣ್ಣವರ ಜಯಂತಿಯನ್ನು ಆಚರಿಸಲಾಗುತ್ತಿದೆ. ವಿಶ್ವಗುರು ಬಸವಣ್ಣನವರು ಈ ಜಗತ್ತು ಕಂಡAತಹ ಅಪ್ರತಿಮ ದಾರ್ಶನಿಕರು, ಸಮಾಜ ಸುಧಾರಕರು ಮಾತ್ರವಲ್ಲ ಹೊಸ ಸಮಾಜದ ನಿರ್ಮಾಪಕರು. ೮೫೦ ವರ್ಷಗಳ ಹಿಂದೆ ಅವರು ಕೈಗೊಂಡ ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ, ಶೈಕ್ಷಣಿಕ ಕ್ರಾಂತಿಯು ಇಂದಿಗೂ ಸಹ ಇಡೀ ಜಗತ್ತಿಗೆ ಆದರ್ಶಪ್ರಾಯವಾಗಿದೆ ಎಂದು ನಿವೃತ್ತ ಪ್ರಾದೇಶಿಕ ಆಯುಕ್ತರಾದ ಎಂ.ಜಿ.ಹಿರೇಮಠ ಹೇಳಿದರು.
ಅವರು ಬೆಳಗಾವಿ ಅಖಿಲ ಭಾರತ ವೀರಶೈವ ಅಂಗಾಯತ ಮಹಾಸಭೆ ಜಿಲ್ಲಾ ಘಟಕ, ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಉತ್ಸವ ಕೇಂದ್ರ ಸಮಿತಿ ಹಾಗೂ ವಿವಿಧ ಲಿಂಗಾಯತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ೮ ಮೇ ೨೦೨೪ ರಂದು ಖಾಸಬಾಗದ ಬಸವವೃತ್ತದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಮುಂದುವರೆದು ಸಮಾಜದ ಪ್ರತಿಯೊಂದು ವರ್ಗದ ಜನರನ್ನು ಅದರಲ್ಲೂ ತಳಸಮುದಾಯದ ಜನರನ್ನು ಮತ್ತು ಮುಖ್ಯವಾಗಿ ಮಹಿಳೆಯರಿಗಾಗಿ ಕೈಗೊಂಡ ಸುಧಾರಣಾ ಕಾರ್ಯಗಳು ಇಂದಿನ ಆಧುನಿಕ ದಿನಗಳಲ್ಲಿಯೂ ಮಾದರಿಯಾಗಿದೆ. ಯಾವ ಒಬ್ಬ ವ್ಯಕ್ತಿಯನ್ನು ಧರ್ಮ-ಜಾತಿ-ವರ್ಣ-ವರ್ಗಗಳ ಆಧಾರದ ಮೇಲೆ ವಿಭಜಿಸಿ ಸಮಾಜ ಒಡೆದು ಹೋಗಿತ್ತೋ ಅದನ್ನು ಒಗ್ಗೂಡಿಸಿದವರು ಬಸವಣ್ಣನವರು. ಮುಂದುವರೆದು ಅವರು ಹೊಸ ಮಾರ್ಗ-ಧರ್ಮದ ಅನ್ವೇಷಕರಾದರು. ಅವರ ವಿಚಾರಗಳನ್ನು ಅನುಷ್ಠಾನಕ್ಕೆ ತರುವುದು ನಮ್ಮ ಕರ್ತವ್ಯವೆಂದು ಹೇಳಿದರು.
ಹಿರಿಯ ಸಾಹಿತಿ ಡಾ.ಗುರುದೇವಿ ಹುಲೆಪ್ಪನವರಮಠ ಅವರು ಮಾತನಾಡಿ, ಕಾಯಕ ದಾಸೋಹ ಪ್ರಸಾದ ಸಿದ್ಧಾಂತಗಳನ್ನು ಅನುಷ್ಠಾನಕ್ಕೆ ತಂದವರು ಬಸವಣ್ಣನವರು. ಎಂಟನೂರು ವರ್ಷಗಳಾದವರು ಅವರ ವಿಚಾರಗಳು ಪ್ರಸ್ತುತವೆನಿಸಿವೆ. ಲಿಂಗ ಸಮಾನತೆಯನ್ನು ನೀಡಿ ನವ ಸಮಾಜವನ್ನು ಕಟ್ಟಿದ ಪುಣ್ಯಪುರುಷರು. ಇಂದು ವಿಶ್ವವೇ ಅವರ ವಿಚಾರಗಳೆಡೆಗೆ ದಾಪುಗಾಲಿಡುತ್ತಿದೆ. ನಾವು ನೀವೆಲ್ಲ ಅಂತಹ ಆದರ್ಶಪಥದಲ್ಲಿ ಮುನ್ನಡೆಯಲು ಮನಸ್ಸು ಮಾಡಬೇಕು. ಅಂದಾಗ ಬಸವ ಜಯಂತಿಗೆ ಅರ್ಥಬರಲು ಸಾಧ್ಯವೆಂದು ಕರೆನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮಹಾಸಭೆ ಜಿಲ್ಲಾಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಅವರು ಮಾತನಾಡಿ, ನಾಲ್ಕುದಿನಗಳ ಬಸವ ಜಯಂತಿ ಉತ್ಸವವನ್ನು ಅರ್ಥಪೂರ್ಣಗೊಳಿಸುವ ನಿಟ್ಟಿನಲ್ಲಿ ಹಲವಾರು ರಚನಾತ್ಮಕವಾದ ಕಾರ್ಯಕ್ರಮಗಳನ್ನು ಸಂಯೋಜನೆ ಮಾಡಲಾಗಿದೆ. ಬೆಳಗಾವಿಯಲ್ಲಿ ಬಸವ ಜಯಂತಿಯನ್ನು ಅನಾವರಣಗೊಳಿಸಲಾಗಿದೆ. ಸಮಾಜದ ಎಲ್ಲ ಸಂಘಟನೆಗಳನ್ನು ತನುಮನದಿಂದ ಕೈಜೋಡಿಸಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದು ಹೆಮ್ಮೆಯನ್ನು ವ್ಯಕ್ತಪಡಿಸಿದರು.
ಆಶೀರ್ವಚನ ನೀಡಿದ ಕಾರಂಜಿಮಠದ ಪೂಜ್ಯ ಗುರುಸಿದ್ಧ ಮಹಾಸ್ವಾಮೀಜಿಯವರು ಬಸವಣ್ಣನವರು ಸಮಾನತೆಯ ಹರಿಕಾರರಾಗಿ ಸಮಾಜ ಹಾಗೂ ಧರ್ಮಗಳನ್ನು ಮುನ್ನಡೆಸಿದವರು. ಅವರ ವಚನಗಳನ್ನು ನಮ್ಮ ಮಕ್ಕಳಿಗೆ ಮುಟ್ಟಿಸುವ ಜವಾಬ್ದಾರಿ ಎಲ್ಲರದೂ. ಬಸವ ಸಂಸ್ಕೃತಿಯ ಬೀಜವನ್ನು ನಾವು ಭಿತ್ತಲೇ ಬೇಕು. ಈ ನಿಟ್ಟಿನಲ್ಲಿ ಜಯಂತಿ ಉತ್ಸವ ಸಮಿತಿ ಕ್ರಿಯಾಶೀಲವಾದ ಕಾರ್ಯಕ್ರಮಗಳನ್ನು ಸಂಯೋಜಿಸಿರುವುದು ಅಭಿಮಾನವೆನಿಸುತ್ತಿದೆ. ಅಣ್ಣನವರ ಜೀವನದ ಸಂದೇಶವನ್ನು ಅರಿತು ನಮ್ಮ ಬದುಕನ್ನು ಪಾವನಗೊಳಿಸೋಣವೆಂದು ನುಡಿದರು.
ಇದೇ ಸಂದರ್ಭದಲ್ಲಿ ಪ್ರಾಥಮಿಕ, ಮಾಧ್ಯಮಿಕ, ಪದವಿಪೂರ್ವ, ಪದವಿ, ಸ್ನಾತಕೋತ್ತರ ಹಾಗೂ ಎಲ್ಲ ವಯೋಮಾನದವರಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನದ ಹಾಗೂ ಪ್ರಶಸ್ತಿ ಪತ್ರಗಳನ್ನು ಪೂಜ್ಯರು ಹಾಗೂ ಗಣ್ಯರು ವಿತರಿಸಿದರು.
ವೇದಿಕೆಯ ಮೇಲೆ ವೈದ್ಯ ಡಾ.ಎಚ್.ಬಿ.ರಾಜಶೇಖರ, ಶಂಕರಣ್ಣ ಬಿಜಾಪುರೆ, ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಗುರುದೇವ ಪಾಟೀಲ, ಡಾ.ದೊಡಮನಿ, ರಾಜು ಕುಂದಗೋಳ, ಈರಣ್ಣ ದಯನ್ನವರ, ಸುಜೀತ ಮುಳಗುಂದ, ಅಣ್ಣಾಸಾಹೇಬ ಕೊರಬು, ಬಾಲಚಂದ್ರ ಬಾಗಿ, ಪ್ರಸಾದ ಹಿರೇಮಠ, ವೀಣಾ ನಾಗಮೋತಿ, ರಕ್ಷಾ ದೇಗಿನಾಳ, ವೀರೇಶ ಅಪ್ಪಯ್ಯನವರಮಠ, ಸಂಜೀವ ದೊಡಮನಿ, ರಮೇಶ ಕಳಸಣ್ಣನವರ, ಸೋಮಲಿಂಗ ಮಾವಿನಕಟ್ಟಿ ಮೊದಲಾದವರು ಉಪಸ್ಥಿತರಿದ್ದರು. ರಾಜು ಕುಂದಗೋಳ ಸ್ವಾಗತಿಸಿದರು. ಎಸ್.ಬಿ.ತಿಗಡಿ ವಂದಿಸಿದರು. ಡಾ.ಮಹೇಶ ಗುರನಗೌಡರ ನಿರೂಪಿಸಿದರು. ಉಮಾದೇವಿ ನಿಜಗುಲಿ ಹಾಗೂ ಶಾಹಾಪೂರ ಅಕ್ಕನ ಬಳಗದ ಶರಣೆಯರು ಪ್ರಾರ್ಥಿಸಿದರು.