ಬೆಂಗಳೂರು08: ಹಿಂದೆ ವೀರೇಂದ್ರ ಪಾಟೀಲ್ ಅವರಿಂದ ಅಧಿಕಾರ ಕಿತ್ತುಕೊಂಡ ಕಾಂಗ್ರೆಸ್ ನಂತರ ಬಿ.ಎಸ್.ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಿ ಲಿಂಗಾಯಿತರಿಗೆ ಅವಮಾನ ಮಾಡಿತ್ತು. ಈಗ ಒಕ್ಕಲಿಗರನ್ನು ಗುರಿಯಾಗಿಸಿಧಿಕೊಂಡು ಒಂದು ಲಕ್ಷ ಪೆನ್‌ಡ್ರೈನ್ ಸಿದ್ಧಪಡಿಸಿ ಹಂಚಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ”ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಲು ಕಾಂಗ್ರೆಸ್ ಕಾರಣ. ಕೇಂದ್ರ ಸರಕಾರದ ವಿರುದ್ಧ ಆರೋಪ ಮಾಡಲೆಂದೇ ಸುರ್ಜೇವಾಲಾ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಹೀಗೆ ಪ್ಲ್ಯಾನ್ ಮಾಡಿದ್ದಾರೆ. ಚಿತ್ರಕಥೆಯನ್ನು ಸುರ್ಜೇವಾಲಾ ಬರೆದಿದ್ದು, ಸಿದ್ದರಾಮಯ್ಯ ನಿರ್ದೇಶನ ಹಾಗೂ ಡಿ.ಕೆ.ಶಿವಕುಮಾರ್ ನಿರ್ಮಾಣ ಮಾಡಿದ್ದಾರೆ,” ಎಂದು ದೂರಿದರು.
‘ಇದೆಲ್ಲಾ ದೊಡ್ಡ ಷಡ್ಯಂತ್ರವಾಗಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಪ್ರಜ್ವಲ್ ರಾಜ್ಯದಲ್ಲಿ ಬಂಧನವಾಗುವುದು ಕಾಂಗ್ರೆಸ್‌ಗೆ ಬೇಕಿರಲಿಲ್ಲ. ದೇಶ ತೊರೆಯಲು ಅವಕಾಶ ನೀಡಿ ಬಳಿಕ ವಿದೇಶದಲ್ಲಿ ಬಂಧಿಸಿದರೆ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸಿಗೆ ಧಕ್ಕೆ ತರಬೇಕೆಂಬ ಉದ್ದೇಶದಿಂದ ಮುಖ್ಯಮಂತ್ರಿ ಕೇಂದ್ರಕ್ಕೆ ಪತ್ರ ಬರೆದರೆ, ರಾಹುಲ್ ಗಾಂಧಿ ಅವರು ಸಿಎಂಗೆ ಪತ್ರ ಬರೆಯುತ್ತಾರೆ. ಇದೆಲ್ಲವೂ ಡ್ರಾಮಾ,” ಎಂದು ಕಿಡಿಕಾರಿದರು.
”ಎಸ್‌ಐಟಿ ರಬ್ಬರ್ ಸ್ಟ್ಯಾಂಪ್ ಆಗಿದ್ದು, ಸಿಎಂ ಸಿದ್ದರಾಮಯ್ಯ ಹೇಳಿದಂತೆ ಕೇಳುತ್ತದೆ. ವಿಡಿಯೊ ಹಂಚುವುದು ಅಪರಾಧ ಎಂದು ಎಸ್‌ಐಟಿ ಹೇಳಿದೆ. ಹಾಗಿದ್ದರೂ ಪೆನ್‌ಡ್ರೈವ್ ಕೊಟ್ಟ ಚಾಲಕನನ್ನು ಈವರೆಗೆ ಜೈಲಿಗೆ ಹಾಕಿಲ್ಲ. ಪೆನ್‌ಡ್ರೈವ್ ಹಂಚಿದವರಲ್ಲಿಎಷ್ಟು ಜನರನ್ನು ಎಸ್‌ಐಟಿ ಜೈಲಿಗೆ ಹಾಕಿದೆ,” ಎಂದು ಪ್ರಶ್ನಿಸಿದರು.
”ಇದು ಎಐಸಿಸಿ ಮಟ್ಟದಲ್ಲೇ ರೂಪಿಸಿರುವ ಸಂಚು.ಬಿಜೆಪಿ- ಜೆಡಿಎಸ್ ಮೈತ್ರಿ ಮುಗಿಸಬೇಕೆಂಬುದೇ ಅವರ ಉದ್ದೇಶ. ಹೆಣ್ಣು ಮಕ್ಕಳ ಮಾನ ಕಾಪಾಡಬೇಕಾದ ಸರಕಾರವೇ ಲಕ್ಷಾಂತರ ಪೆನ್‌ಡ್ರೈವ್‌ಗಳ್ನು ಬೀದಿಬೀದಿಗಳಲ್ಲಿ ಹಂಚಿದೆ. ಇದಕ್ಕೆ 60-70 ಲಕ್ಷ ರೂ. ವೆಚ್ಚವಾಗಲಿದ್ದು, ಭರಿಸಿದವರು ಯಾರು? ಈ ಸಂಚಿನಲ್ಲಿ ಸಿದ್ದರಾಮಯ್ಯ ಸರಕಾರದ ಇಡೀ ಸಂಪುಟವಿದ್ದು, ಸರಕಾರವೇ ಅಪರಾಧಿ ಸ್ಥಾನದಲ್ಲಿದೆ. ಪ್ರಕರಣದಲ್ಲಿ ಸರಕಾರದ ಪಾತ್ರವಿದೆ ಎಂದು ಕಾನೂನು ತಜ್ಞರೇ ಹೇಳಿದ್ದು, ರಾಜ್ಯಪಾಲರು ಕೂಡಲೇ ಸರಕಾರವನ್ನು ವಜಾಗೊಳಿಸಬೇಕು,” ಎಂದು ಆಗ್ರಹಿಸಿದರು.
”ಪ್ರಜ್ವಲ್ ತಪ್ಪು ಮಾಡಿದ್ದರೆ, ಶಿಕ್ಷೆಯಾಗಲಿ. ಆದರೆ ಎಚ್.ಡಿ. ರೇವಣ್ಣ ಅವರನ್ನು ಸಿಕ್ಕಿಸಲು ಸರಕಾರ ಚಿತಾವಣೆ ನಡೆಸಿದೆ. ಬಿಜೆಪಿ- ಜೆಡಿಎಸ್ ಮೈತ್ರಿಯಿಂದಾಗಿ ತಮಗೆ ಉಳಿಗಾಲವಿಲ್ಲ ಎಂಬ ಆತಂಕದಿಂದ ಕಾಂಗ್ರೆಸ್ ಈ ರೀತಿ ಮಾಡುತ್ತಿದೆ. ಕಾಂಗ್ರೆಸ್ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬವನ್ನೇ ಟಾರ್ಗೆಟ್ ಮಾಡಿದೆ,” ಎಂದು ದೂರಿದರು.
”ಎಸ್‌ಐಟಿ ಸರಕಾರದ ಪರ ಕೆಲಸ ಮಾಡುತ್ತಿದ್ದು, ಮೂರು ಪೈಸೆ ಬೆಲೆ ಇಲ್ಲ. ಒಬ್ಬ ಚಾಲಕನಿಗೆ ವಿದೇಶಕ್ಕೆ ಹೋಗಲು ಹಣವಿದೆಯೇ? ಕಾರ್ತಿಕ್ ವಿದೇಶಕ್ಕೆ ಹೋಗಲು ದುಡ್ಡು ಕೊಟ್ಟವರು ಯಾರು? ಚುನಾವಣೆಗಾಗಿ ಕಾಂಗ್ರೆಸ್‌ನವರೇ ಈ ಸಂಚು ರೂಪಿಸಿದ್ದಾರೆ. ಇದರ ವಿರುದ್ಧ ಹೋರಾಟ ನಡೆಸಲಿದ್ದು, ವರಿಷ್ಠರೊಂದಿಗೆ ಚರ್ಚಿಸಿ ಹೋರಾಟದ ಸ್ವರೂಪ ನಿರ್ಧರಿಸಲಾಗುವುದು. ಮುಂದಿನ ಹೋರಾಟದ ಬಗ್ಗೆ ಜೆಡಿಎಸ್ ಜತೆಗೂ ಚರ್ಚಿಸಲಾಗುವುದು,” ಎಂದು ಹೇಳಿದರು. ”ಸಂತ್ರಸ್ತೆಯರಿಗೆ ಪಕ್ಷದಿಂದ ಕಾನೂನು ಸಹಕಾರ ಕಲ್ಪಿಸುವ ಸಂಬಂಧ ಚರ್ಚಿಸಲಾಗುವುದು,” ಎಂದರು.