ಬೀಡ್,08: ”ಕಾಂಗ್ರೆಸ್ ಮತ್ತೆ ದೇಶದಲ್ಲಿ ಅಧಿಕಾರಕ್ಕೆ ಬಂದರೆ ತುಷ್ಟೀಕರಣ ರಾಜಕಾರಣದ ಭಾಗವಾಗಿ, ಶಾ ಬಾನೋ ಪ್ರಕರಣದಲ್ಲಿ 1985ರ ಐತಿಹಾಸಿಕ ಸುಪ್ರೀಂ ಕೋರ್ಟ್ ತೀರ್ಪನ್ನು ರಾಜೀವ್ ಗಾಂಧಿ ಸರ್ಕಾರ ರದ್ದುಗೊಳಿಸಿದಂತೆಯೇ ರಾಮ ಮಂದಿರ ಕುರಿತ ತೀರ್ಪನ್ನೂ ರದ್ದುಗೊಳಿಸುತ್ತದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬಿಜೆಪಿ ಅಭ್ಯರ್ಥಿ ಪಂಕಜಾ ಮುಂಡೆ ಪರವಾಗಿ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬೇಜೋಗೈಯಲ್ಲಿ ಮಂಗಳವಾರ ಚುನಾವಣಾ ರ‍್ಯಾಲಿ ಉದ್ದೇಶಿಸಿ ಅವರು ಮಾತನಾಡಿದರು.
”ರಾಮಮಂದಿರ ಪ್ರಕರಣದಲ್ಲಿ 2019ರ ಸುಪ್ರೀಂ ತೀರ್ಪಿನ ನಂತರ ಆಯ್ದ ಜನರ ಸಭೆಯನ್ನು ಶೆಹಜಾದಾ (ಸಂಸದ ರಾಹುಲ್ ಗಾಂಧಿಯ ಉಲ್ಲೇಖ) ಕರೆದಿದ್ದರು. ಮತ್ತು ಅವರ ಪಕ್ಷವು ಮರಳಿ ಅಧಿಕಾರಕ್ಕೆ ಬಂದರೆ, ಶಾ ಬಾನೋ ವಿಷಯದಲ್ಲಿ ಅವರ ತಂದೆ (ಅಂದಿನ ಪ್ರಧಾನಿ ರಾಜೀವ್ ಗಾಂಧಿ) ಮಾಡಿದಂತೆ ರಾಮಮಂದಿರದ ಸುಪ್ರೀಂ ತೀರ್ಪನ್ನೂ ರದ್ದುಗೊಳಿಸಲಾಗುತ್ತದೆ ಎಂದು ಇತ್ತೀಚೆಗೆ ಪಕ್ಷ ತೊರೆದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಬಹಿರಂಗಪಡಿಸಿದ್ದಾರೆ” ಎಂದು ಅವರು ತಿಳಿಸಿದರು.
1985ರಲ್ಲಿ, ವಿಚ್ಛೇದನದ ನಂತರ ತನ್ನ ಪತಿಯಿಂದ ಜೀವನಾಂಶ ಕೋರಿದ ಇಂದೋರ್‌ನ ಶಾ ಬಾನೋ ಎಂಬ ಮುಸ್ಲಿಂ ಮಹಿಳೆಯ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಆದರೆ, ಆಗಿನ ರಾಜೀವ್ ಗಾಂಧಿ ಸರ್ಕಾರ ಕಾಯಿದೆಯ ಮೂಲಕ ಆ ತೀರ್ಪನ್ನು ರದ್ದುಗೊಳಿಸಿತ್ತು. ನವೆಂಬರ್ 2019ರಲ್ಲಿ, ಐದು ನ್ಯಾಯಾಧೀಶರಿದ್ದ ಸುಪ್ರೀಂ ಕೋರ್ಟ್ ಪೀಠವು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತ್ತು. ಇದರೊಂದಿಗೆ ದಶಕಗಳ ಭೂ ವಿವಾದ ಕೊನೆಗೊಂಡಿದೆ.
”ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ದೇವಾಲಯದಲ್ಲಿ ಆಚರಿಸಲಾಗುವ ಆಚರಣೆಗಳನ್ನು “ಬೇಕಾರ್” (ನಿಷ್ಪ್ರಯೋಜಕ) ಮತ್ತು “ಪಾಖಂಡ್” (ಬೂಟಾಟಿಕೆ) ಎಂದು ಕರೆಯುವ ಮೂಲಕ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಶ್ರೀರಾಮ ಮತ್ತು ಅವರ ಭಕ್ತರನ್ನು ಅವಮಾನಿಸಿವೆ” ಎಂದು ಮೋದಿ ತಿಳಿಸಿದರು. “ಅವರು ತುಷ್ಟೀಕರಣ ರಾಜಕಾರಣಕ್ಕಾಗಿ ಭಗವಾನ್ ರಾಮ ಮತ್ತು ರಾಮಭಕ್ತರನ್ನು ಅವಮಾನಿಸಿದ್ದಾರೆ. ಅಂತಹ ಪಕ್ಷಗಳು ಮಹಾರಾಷ್ಟ್ರದ ಕೀರ್ತಿಯನ್ನು ಹೆಚ್ಚಿಸಬಹುದೇ?” ಎಂದು ವೇದಿಕೆ ಮುಂಭಾಗದಲ್ಲಿ ನೆರೆದಿದ್ದ ಜನರನ್ನು ಪ್ರಧಾನಿ ಕೇಳಿದರು.
26/11ರ ದಾಳಿಯ ಸಂದರ್ಭದಲ್ಲಿ ಆಗಿನ ಮಹಾರಾಷ್ಟ್ರದ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಪಾಕಿಸ್ತಾನದ ಭಯೋತ್ಪಾದಕ ಅಜ್ಮಲ್ ಕಸಬ್ ಕೊಂದಿರಲಿಲ್ಲ ಎಂಬ ಉತ್ತರ ಪ್ರದೇಶದ ‘ಇಂಡಿಯಾ’ ಒಕ್ಕೂಟದ ನಾಯಕ ಮತ್ತು ಹಿರಿಯ ಕಾಂಗ್ರೆಸ್ ರಾಜಕಾರಣಿ ವಿಜಯ್ ವಾಡೆತ್ತಿವಾರ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಮೋದಿ, “ವೋಟ್ ಜಿಹಾದ್” ಕುರಿತು ಟೀಕಿಸಿದರು. ”2008ರ ನವೆಂಬರ್‌ನಲ್ಲಿ ಮುಂಬೈ ಪ್ರವೇಶಿಸಿ ರಕ್ತಪಾತ ಸೃಷ್ಟಿಸಿದ್ದ ಹತ್ತು ಉಗ್ರರೊಂದಿಗೆ ಕಾಂಗ್ರೆಸ್‌ಗೆ ಸಂಪರ್ಕವಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
“ಯೇ ರಿಷ್ತಾ ಕ್ಯಾ ಕೆಹ್ಲಾತಾ ಹೈ?(ಈ ಸಂಬಂಧವನ್ನು ಏನೆಂದು ಸೂಚಿಸುತ್ತದೆ?) ಎಂದು ಜನರು ಕಾಂಗ್ರೆಸ್ಸಿಗೆ ಕೇಳುತ್ತಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದಕರನ್ನು ಪ್ರಧಾನಿ ಮನೆಯಲ್ಲೇ ಸ್ವಾಗತಿಸಲಾಗುತ್ತಿತ್ತು. ದೆಹಲಿಯ ಬಾಟ್ಲಾ ಹೌಸ್ ಎನ್‌ಕೌಂಟರ್ ನಂತರ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಕಣ್ಣೀರು ಹಾಕಿದ್ದರು. ಈ ಹಳೆಯ ದಿನಗಳನ್ನು ಮರಳಿ ತರಲು ಬಯಸುತ್ತೀರಾ ಎಂದು ಕಾಂಗ್ರೆಸ್‌ಗೆ ಕೇಳ ಬಯಸುತ್ತೇನೆ. ಆದರೆ, ಮೋದಿ ನಿಮ್ಮ ಮುಂದೆ ‘ಚಟ್ಟನ್’ (ಬಂಡೆ)ಯಂತೆ ನಿಂತಿದ್ದಾರೆ” ಎಂದು ಸೇರಿದ್ದ ಜನರಿಗೆ ಅವರು ಹೇಳಿದರು. ಬೀಡ್ ಲೋಕಸಭಾ ಕ್ಷೇತ್ರಕ್ಕೆ ಮೇ 13ರಂದು ನಾಲ್ಕನೇ ಹಂತದಲ್ಲಿ ಮತದಾನ ನಡೆಯಲಿದೆ.