ಶ್ರೀರಂಗಪಟ್ಟಣ,05: ಬರಗಾಲ ಹಾಗೂ ಕೆಆರ್‌ಎಸ್ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಲ್ಲಿ ನೀರು ಹರಿಯದ ಕಾರಣ ತಾಲೂಕಿನಾದ್ಯಂತ ಇರುವ 43 ಕೆರೆಗಳು ಶೇ.99 ರಷ್ಟು ಬರಿದಾಗಿವೆ.
ತಾಲೂಕಿನಾದ್ಯಾಂತ 43 ಕೆರೆ ಹಾಗೂ ಕಟ್ಟೆಗಳಿವೆ. ಈ ಪೈಕಿ ಪಂಚಾಯತ್ ರಾಜ್ ಇಲಾಖೆ ಯೋಜನೆಯಡಿ 40 ಕೆರೆಗಳಿದ್ದು, ಎಲ್ಲಾಕೆರೆಗಳು ಬತ್ತಿಹೋಗಿವೆ. ಕಾವೇರಿ ನೀರಾವರಿ ನಿಗಮ ವ್ಯಾಪ್ತಿಗೆ ಬರುವ ಅರಕೆರೆ, ಗೆಂಡೆಹೊಸಹಳ್ಳಿ, ದೊಡ್ಡ ಅಂಕನಹಳ್ಳಿ ಕೆರೆಗಳ ಪೈಕಿ ಶೇ.10 ರಷ್ಟು ನೀರು ಮಾತ್ರ ಇದ್ದು, ಶೀಘ್ರ ಮಳೆಯಾಗದಿದ್ದರೆ ಆ ಕೆರೆಗಳು ಸಂಪೂರ್ಣ ಬತ್ತಿ ಹೋಗುತ್ತವೆ.
ಮಳೆಯಾಶ್ರಿತ ಪ್ರದೇಶವನ್ನೇ ಹೊಂದಿರುವ ನೇರಳಕೆರೆಯ ಮೊರಯ್ಯನಕೆರೆ ಹಾಗೂ ತಾವರೆಕಟ್ಟೆ ಕೆರೆಗಳು, ಹುಂಜನಕೆರೆ ಕೆರೆ, ಟಿ.ಎಂ. ಹೊಸೂರು ಜೋಡಿ ಕೆರೆ ಸೇರಿದಂತೆ ನಾನಾ ಕೆರೆಗಳಲ್ಲಿ ಹನಿ ನೀರು ಇಲ್ಲದ ಕಾರಣ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ತತ್ವಾರ ಒದಗಿ ಬಂದಿದೆ.
ಜಾನುವಾರುಗಳಿಗೆ ಕುಡಿಯಲು ನೀರು ಸಿಗದೆ ಅಲ್ಲೊಂದು, ಇಲ್ಲೊಂದು ಇರುವ ಕೊಳವೆ ಬಾವಿಯನ್ನೋ ಅಥವಾ ಜನರು ಕುಡಿಯಲು ಗ್ರಾಮದಲ್ಲಿ ಟ್ಯಾಂಕರ್ ಮೂಲಕ ಸರಬರಾಜು ಮಾಡುತ್ತಿರುವ ನೀರನ್ನೇ ಬಳಸಬೇಕಾಗಿದೆ. ಬಟ್ಟೆ ತೊಳೆಯಲು, ಸ್ನಾನ ಮಾಡಲು ವಾರಗಟ್ಟಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ವಿಶ್ವೇಶ್ವರಯ್ಯ ನಾಲೆ ಅವಲಂಬಿತ ಜಮೀನು ಹೊಂದಿರುವ ಗ್ರಾಮಗಳಲ್ಲಿ ಬೇಸಿಗೆ ಕಾಲದಲ್ಲಿಯೂ ನಾಲೆಗೆ ನೀರು ಹರಿಸುತ್ತಿದ್ದರಿಂದ ಹಳ್ಳ, ಕೊಳ್ಳಗಳಲ್ಲಿ ನೀರು ಸಿಗುತ್ತಿತ್ತು. ಕಟ್ಟೆಗಳಲ್ಲಿಯೂ ಕೆಲವು ದಿನ ನೀರು ಇರುತ್ತಿತ್ತು. ನಾಲೆ ಆಧುನೀಕರಣ ನೆಪದಲ್ಲಿ ವಿಶ್ವೇಶ್ವರಯ್ಯ ನಾಲೆ, ಉಪ ನಾಲೆಗಳಿಗೆ ನೀರು ಹರಿಸದ ಕಾರಣ ನಾಲೆ ಅವಲಂಬಿತ ಜಮೀನು ಹೊಂದಿದ್ದ ಗ್ರಾಮಗಳ ಜನರು ಜಾನುವಾರುಗಳ ಕುಡಿಯುವ ನೀರಿಗೆ ಹುಡುಕಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಾನುವಾರುಗಳನ್ನು ಜಮೀನುಗಳಿಂದ ಮನೆಗೆ ಕರೆತಂದು ನೀರು ಕುಡಿಸಬೇಕಾದ ಪರಿಸ್ಥಿತಿ ಬಂದೊದಗಿದೆ.
ನಮ್ಮೂರು ಕೆರೆಗೆ ಏತ ನೀರಾವರಿ ಯೋಜನೆಯಡಿ ಮಳೆಗಾದಲ್ಲಿ ನೀರು ತುಂಬಿಸುವಂತೆ ತಾಲೂಕು ಆಡಳಿತಕ್ಕೆ ಹತ್ತಾರು ಬಾರಿ ಮನವಿ ಮಾಡಿದ್ದೇವೆ, ಆದರೂ ಪ್ರಯೋಜನವಾಗಿಲ್ಲ. ಕೆರೆಯಲ್ಲಿ ನೀರು ಇಲ್ಲದ ಕಾರಣ ಗ್ರಾಮದಲ್ಲಿದ್ದ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಹನಿ ನೀರಿಗೂ ತತ್ವಾರ ಒದಗಿಬಂದಿದೆ. ಶೀಘ್ರ ಮಳೆಯಾಗದಿದ್ದರೆ ನಮ್ಮೂರ ಗ್ರಾಮಸ್ಥರ ಸ್ಥಿತಿ ಚಿಂತಾಜನಕವಾಗುತ್ತದೆ.