ಬೆಂಗಳೂರು04: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ತಾಯಿ ಭವಾನಿ ರೇವಣ್ಣ ಅವರಿಗೆ ಎಸ್‌ಐಟಿ ನೋಟಿಸ್ ರವಾನಿಸಿದೆ. ಸ್ಥಳಿಯ ಪೊಲೀಸರ ಮೂಲಕ ಹಾಸನದಲ್ಲಿರುವ ರೇವಣ್ಣ ನಿವಾಸಕ್ಕೆ ಎಸ್ಐಟಿ ನೋಟಿಸ್ ರವಾನಿಸಿದೆ.
ಹಾಸನದ ಸ್ಥಳೀಯ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಜಯ್ ಕುಮಾರ್ ಜೊತೆ ಸಿಬ್ಬಂದಿ ಶುಕ್ರವಾರ ರೇವಣ್ಣ ಅವರ ನಿವಾಸಕ್ಕೆ ಭೇಟಿ ನೀಡಿ, ಭವಾನಿ ರೇವಣ್ಣ ಅವರಿಗೆ ನೋಟಿಸ್ ತಲುಪಿಸಿದೆ. ಶನಿವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ನಲ್ಲಿ ತಿಳಿಸಲಾಗಿದೆ ಎಂದು ವಿಶೇಷ ತನಿಖಾ ತಂಡದ ಮೂಲಗಳು ಮಾಹಿತಿ ನೀಡಿವೆ.
ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ಎಸ್ಐಟಿ ತನಿಖೆಗೆ ಆದೇಶಿಸಿದೆ. ಪ್ರಕರಣ ಸಂಬಂಧ ಎಸ್ಐಟಿ ತನಿಖೆ ಚುರುಕುಗೊಂಡಿದ್ದು, ಈಗಾಗಲೇ ರೇವಣ್ಣ, ಪ್ರಜ್ವಲ್ ರೇವಣ್ಣಗೆ ನೋಟಿಸ್ ಜಾರಿ ಮಾಡಿತ್ತು. ಈ ಮಧ್ಯೆ ಪ್ರಜ್ವಲ್ ವಿರುದ್ಧ ಸಿಐಡಿಯಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ. ‘ಪ್ರಜ್ವಲ್ ರೇವಣ್ಣ ಬ್ಲ್ಯಾಕ್ಮೇಲ್ ಮಾಡಿ ತಮ್ಮ ಮೇಲೆ ಅತ್ಯಾಚಾರ ಮಾಡಿದ್ದಾರೆ’ ಎಂದು ಮಹಿಳೆಯೊಬ್ಬರು ದೂರಿನಲ್ಲಿ ಆರೋಪಿಸಿದ್ದಾರೆ.
ಇನ್ನು ಮಹಿಳೆಯೊಬ್ಬರ ಅಪಹರಣ ಆರೋಪ ಪ್ರಕರಣ ಸಂಬಂಧ ಹೆಚ್.ಡಿ.ರೇವಣ್ಣ ವಿರುದ್ಧ ಮೈಸೂರಲ್ಲಿ ದೂರು ದಾಖಲಾಗಿದೆ.