ಹಾಸನ ಪೆನ್​ ಡ್ರೈವ್​ ಕೇಸ್ ಸಂಬಂಧ ಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ತೆಯ ಹೇಳಿಕೆ ದಾಖಲು: ಸಚಿವ ಜಿ.ಪರಮೇಶ್ವರ್

Ravi Talawar
ಹಾಸನ ಪೆನ್​ ಡ್ರೈವ್​ ಕೇಸ್ ಸಂಬಂಧ ಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ತೆಯ ಹೇಳಿಕೆ ದಾಖಲು: ಸಚಿವ ಜಿ.ಪರಮೇಶ್ವರ್
WhatsApp Group Join Now
Telegram Group Join Now

ಬೆಂಗಳೂರು: ಹಾಸನ ಜೆಡಿಎಸ್ ಸಂಸದ‌ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯೊಬ್ಬರು ನ್ಯಾಯಾಧೀಶರ ಮುಂದೆ ತಮ್ಮ ಹೇಳಿಕೆ ದಾಖಲಿಸಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್​ ತಿಳಿಸಿದರು. ಸದಾಶಿವನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ಸಂತ್ರಸ್ತೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಎಸ್ಐಟಿ ಅಧಿಕಾರಿಗಳು ಒತ್ತಾಯಪೂರ್ವಕವಾಗಿ ಹೇಳಿಕೆ ಪಡೆದುಕೊಂಡಿದ್ದಾರೆ ಎಂಬ ಆರೋಪ ಬರಬಾರದು. ಅದಕ್ಕಾಗಿ ಮ್ಯಾಜಿಸ್ಟ್ರೇಟ್ ಮುಂದೆಯೇ ಸೆಕ್ಷನ್ 164 ಅಡಿ ಹೇಳಿಕೆ ಕೊಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ನೋಟಿಸ್‌ಗೆ ಸ್ಪಂದಿಸದಿದ್ದರೆ ಕಾನೂನು ಪ್ರಕಾರ ಕ್ರಮ: ಪ್ರಜ್ವಲ್ ರೇವಣ್ಣಗೆ ಸೆಕ್ಷನ್ 41A ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ಅವರ ಪರ ವಕೀಲರು ಕಾಲಾವಕಾಶ ಕೇಳಿದ್ದಾರೆ. ಇದಕ್ಕೆ ಅವಕಾಶವಿಲ್ಲ ಎಂದು ತಿಳಿಸಿದ್ದೇವೆ. ರೇವಣ್ಣ ಅವರಿಗೂ ಕೂಡ 41A ಅಡಿಯಲ್ಲೇ ನೋಟಿಸ್ ನೀಡಲಾಗಿದೆ. ರೇವಣ್ಣ ಸಹ 24 ಗಂಟೆ ಕಾಲಾವಕಾಶ ಕೇಳಿದ್ದಾರೆ. ಕಾನೂನು ಪ್ರಕಾರ ಮತ್ತೊಂದು ನೋಟಿಸ್​ ನೀಡಿದ್ದೇವೆ. ಇದಕ್ಕೆ ಸ್ಪಂದಿಸದಿದ್ದರೆ, ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು‌.

ಪ್ರಜ್ವಲ್ ರೇವಣ್ಣ ದುಬೈಗೆ ಹೋಗಿರುವುದು ಗೊತ್ತಿಲ್ಲ: ಪ್ರಜ್ವಲ್ ರೇವಣ್ಣ ಕುರಿತು ಲುಕ್​ಔಟ್ ನೋಟಿಸ್​ ಹೊರಡಿಸಲಾಗಿದೆ.‌ ಎಲ್ಲ ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣಗಳಿಗೆ ಫೋಟೋಸಮೇತ ನೋಟಿಸ್​ ಕಳುಹಿಸಲಾಗಿದೆ‌‌.‌ ನಿಯಮಾನುಸಾರ ಪ್ರಕಾರವೇ ಲುಕ್ ಔಟ್ ನೋಟಿಸ್​ ನೀಡಲಾಗಿದೆ. ರೇವಣ್ಣ ಅವರ ಮನೆ ಮೇಲೆ ಎಸ್‌ಐಟಿ ದಾಳಿ ನಡೆಸಿರುವುದು ಗೊತ್ತಿಲ್ಲ. ಅವರು ದುಬೈಗೆ ಹೋಗಿರುವುದು ಗೊತ್ತಿಲ್ಲ. ಜರ್ಮನಿಗೆ ಹೋಗಿದ್ದಾರೆ ಎಂಬ ಮಾಹಿತಿ ಇದೆ. ಜರ್ಮನಿಯಿಂದ‌ ಕರೆತರಲು ಕೇಂದ್ರದ ನೆರವು ಬೇಕು. 2ನೇ ನೋಟಿಸ್‌ಗೂ ಸ್ಪಂದಿಸದಿದ್ದರೆ ಮುಂದಿನ ತೀರ್ಮಾನವೇನು ಎಂಬುದನ್ನು ಎಸ್ಐಟಿ ಅಧಿಕಾರಿಗಳು ಕೈಗೊಳ್ಳುತ್ತಾರೆ ಎಂದರು.

ರಾಜಕೀಯ ಟೀಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ. ನನಗೆ ಒಂದಷ್ಟು ಜವಾಬ್ದಾರಿಗಳಿವೆ. ಹೆಚ್.ಡಿ.ಕುಮಾರಸ್ವಾಮಿ ಯಾವ ಆಧಾರದ ಮೇಲೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ‌. ಇದಕ್ಕೆಲ್ಲ ಮುಖ್ಯಮಂತ್ರಿಯವರು, ಪಕ್ಷದ ಅಧ್ಯಕ್ಷರು ಉತ್ತರಿಸುತ್ತಾರೆ ಎಂದು ಹೇಳಿದರು.

WhatsApp Group Join Now
Telegram Group Join Now
Share This Article