ನವದೆಹಲಿ,03: ಹುಬ್ಬಳ್ಳಿಯಲ್ಲಿ ಹತ್ಯೆಯಾದ ನೇಹಾ ಹಿರೇಮಠ್ ಪ್ರಕರಣ ನಿಜವಾಗಿಯೂ ಲವ್ ಜಿಹಾದ್ ಪ್ರಕರಣ ಆಗಿದೆ. ನಾವು ಅದಕ್ಕೆ ಲವ್ ಜಿಹಾದ್ ಬಣ್ಣ ಕಟ್ಟುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಿಡಿ ಕಾರಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ನೇಹಾ ಹಿರೇಮಠ್ ಪ್ರಕರಣಕ್ಕೆ ನಾವು ಲವ್ ಜಿಹಾದ್ ಬಣ್ಣ ಕಟ್ಟುತ್ತಿಲ್ಲ. ಇದು ಖಂಡಿತವಾಗಿಯೂ ಲವ್ ಜಿಹಾದ್ ಪ್ರಕರಣವೇಎಂದು ಅಸಮಾಧಾನ ಹೊರಹಾಕಿದ್ದಾರೆ.
ʻನೇಹಾ ಹೀರೇಮಠ್ ಪ್ರಕರಣವನ್ನು ಸಿಎಂ, ಡಿಸಿಎಂ ವೈಯಕ್ತಿಕ ಕಾರಣಗಳಿಗೆ ನಡೆದಿದೆʼ ಎಂದಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಕರ್ನಾಟಕ ಸಿಎಂ, ಡಿಸಿಎಂ ಅಲ್ಪ ಸಂಖ್ಯಾತರ ಮತಬ್ಯಾಂಕ್‌ಗಾಗಿ ಆ ರೀತಿ ಹೇಳಿದ್ದಾರೆ. ನಾನು ಅವರಿಗೆ ಒಂದು ಪ್ರಶ್ನೆ ಕೇಳ್ತೀನಿ, ಕಾಲೇಜು ಕ್ಯಾಂಪಸ್‌ನಲ್ಲಿ ಈ ರೀತಿ ಕೊಲೆ ನಡೆಯುತ್ತದೆ ಎಂದರೆ ಅದು ವೈಯಕ್ತಿಕ ವಿಷಯ ಹೇಗಾಗುತ್ತದೆ? ಕಾಲೇಜು ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿನಿಯರಿಗೆ ಭದ್ರತೆ ಸಿಗಬೇಕೋ ಬೇಡವೋ? ಎಂದು ಪ್ರಶ್ನಿಸಿದರಲ್ಲದೇ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈ ರೀತಿ ಸತ್ಯ ಮುಚ್ಚಿಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿದ್ದ ಬಾಂಬ್ ಸ್ಫೋಟವನ್ನೂ ಸಹ ಸಿಲಿಂಡರ್ ಸ್ಫೋಟ ಎಂದು ತಪ್ಪಾಗಿ ಬಿಂಬಿಸಲು ಹೊರಟಿದ್ದರು. ಆದ್ರೆ ಎನ್‌ಐಎ ತನಿಖೆಯಿಂದಾಗಿ ಸತ್ಯ ಬಯಲಾಯಿತು. ಬೆಂಗಳೂರಿನಲ್ಲಿ ಕಳೆದ 10 ವರ್ಷಗಳಿಂದ ಬಾಂಬ್ ಸ್ಫೋಟ ನಡೆದಿರಲಿಲ್ಲ. ಆದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಬಾಂಬ್ ಸ್ಫೋಟಗಳು ನಡೆಯಲಾರಂಭಿಸಿವೆ ಎಂದು ಕಿಡಿ ಕಾರಿದ್ದಾರೆ.
ತಮ್ಮ ವೋಟ್ ಬ್ಯಾಂಕ್ ರಾಜಕಾರಣದಿಂದ ಅವರು ಎಷ್ಟು ಕೆಳಮಟ್ಟಕ್ಕೆ ಹೋಗುತ್ತಿದ್ದಾರೆ ಅಂದ್ರೆ, ಈ ದೇಶದ ಭದ್ರತೆ, ಬೆಂಗಳೂರಿನ ಭದ್ರತೆ ಮಾತ್ರವಲ್ಲ ಇಡೀ ಕರ್ನಾಟಕದ ಭದ್ರತೆಯನ್ನೂ ಕಾಂಗ್ರೆಸ್ ಕಡೆಗಣಿಸಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ ಚುನಾವಣಾ ಫಲಿತಾಂಶದ ಕುರಿತು ಮಾತನಾಡಿದ ಅವರು, ಕರ್ನಾಟಕದಲ್ಲಿ 2ನೇ ಹಂತದ ಮತದಾನ ನಡೆಯಬೇಕಿದೆ. ಹೆಚ್ಚು-ಕಡಿಮೆ ನಾವು ನಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.