ನವದೆಹಲಿ02: ದೆಹಲಿ ಮಹಿಳಾ ಆಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ 223 ಉದ್ಯೋಗಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೆಲಸದಿಂದ ತೆಗೆದುಹಾಕಲಾಗಿದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಸಕ್ಸೇನಾ ಅವರ ಆದೇಶದ ಮೆರೆಗೆ ಈ ಕ್ರಮ ಜರುಗಿಸಲಾಗಿದೆ.
ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಅನುಮತಿಯಿಲ್ಲದೇ ನಿಯಮಗಳಿಗೆ ವಿರುದ್ಧವಾಗಿ 223 ಜನರನ್ನು ನೇಮಕ ಮಾಡಿದ್ದರು ಎಂದು ಆರೋಪಿಸಲಾಗಿದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ತಮ್ಮ ಆದೇಶದಲ್ಲಿ, ಕೇವಲ 40 ಹುದ್ದೆಗಳನ್ನು ಮಾತ್ರ ಮಂಜೂರು ಮಾಡಲು ಅವಕಾಶವಿದೆ. ಆದರೆ DCW ಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳುವ ಹಕ್ಕನ್ನು ಹೊಂದಿಲ್ಲ ಎಂದು ತಿಳಿಸಿದ್ದಾರೆ. ಸ್ವಾತಿ ಮಲಿವಾಲ್ ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ನಿಯಮಗಳನ್ನು ಕಡೆಗಣಿಸಿ ಈ ನೇಮಕಾತಿ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
2015ರಲ್ಲಿ ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರವು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರನ್ನಾಗಿ ಸ್ವಾತಿ ಮಲಿವಾಲ್ ಅವರನ್ನು ನೇಮಕ ಮಾಡಿತ್ತು. ಇದಕ್ಕೂ ಮುನ್ನ ಸ್ವಾತಿ ಸಿಎಂ ಕೇಜ್ರಿವಾಲ್ ಅವರ ಸಲಹೆಗಾರರಾಗಿದ್ದರು. ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಆದ ಬಳಿಕ ಮಲಿವಾಲ್ ವಿರುದ್ಧ ಭ್ರಷ್ಟಾಚಾರ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಅಕ್ರಮ ನೇಮಕಾತಿ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸ್ವಾತಿ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯೋಗದಲ್ಲಿ ನೇಮಕಗೊಂಡವರನ್ನು ವಿಚಾರಣೆಗೆ ಒಳಪಡಿಸಿದಾಗ 91 ನೇಮಕಾತಿಗಳಲ್ಲಿ ನಿಯಮ ಪಾಲಿಸದಿರುವುದು ಬೆಳಕಿಗೆ ಬಂದಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳ ಆರೋಪಿಸಿತ್ತು.