ಕಲಬುರಗಿ02: ಕರ್ನಾಟಕ ಸರ್ಕಾರದ ಐದು ಭರವಸೆಗಳು ಮತ್ತು ಅಖಿಲ ಭಾರತ ಮಟ್ಟದಲ್ಲಿ ಕಾಂಗ್ರೆಸ್ ನೀಡಿದ ಐದು ನ್ಯಾಯ ಹಾಗೂ 25 ಭರವಸೆಗಳು ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ‘ಬ್ರಹ್ಮಾಸ್ತ್ರ’ ಆಗಲಿವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ನಮ್ಮ ಜನಪರ ಪ್ರಣಾಳಿಕೆ ನೋಡಿ ಪ್ರಧಾನಿ ಮೋದಿಯವರು ನಿರಾಶರಾಗಿದ್ದಾರೆ. ಹೀಗಾಗಿ ಪದೇ ಪದೇ ಕಾಂಗ್ರೆಸ್ ಪಕ್ಷವನ್ನು ಹೀಯಾಳಿಸಲು ಪ್ರಾರಂಭಿಸಿದ್ದಾರೆ. ಆ ಭಗವಂತನನ್ನು ದಿನಕ್ಕೆ ಎಷ್ಟು ಬಾರಿ ಅವರು ನೆನಸುತ್ತಾರೆ ಗೊತ್ತಿಲ್ಲಾ, ಆದರೆ ಅದಕ್ಕಿಂತ ಹೆಚ್ಚು ಬಾರಿ ಅವರು ಕಾಂಗ್ರೆಸ್ ಪಕ್ಷವನ್ನ ಹೀಯಾಳಿಸೋದು ಸತ್ಯಪ್ರತಿ ದಿನ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ನನ್ನನ್ನ ದೂಷಿಸುತ್ತಾರೆ. ಈ ಮೂಲಕ ಜನರಲ್ಲಿ ನಮ್ಮ ವಿರುದ್ದ ದ್ವೇಷ ಹುಟ್ಟಿಸುವ ಕೆಲಸ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.
ಜಾರಿಗೆ ತರಲು ಸಾಧ್ಯವಾಗದ ಆಶ್ವಾಸನೆಗಳನ್ನು ಪ್ರಧಾನಿ ನೀಡಲಾರಂಭಿಸಿದ್ದಾರೆ. 2014 ಮತ್ತು 2019ರಲ್ಲಿ ನೀಡಿದ್ದ ಆಶ್ವಾಸನೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿದ್ದಾರೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಠೇವಣಿ ಇಟ್ಟಿರುವ ಕಪ್ಪುಹಣದಿಂದ ಪ್ರತಿಯೊಬ್ಬ ನಾಗರಿಕರಿಗೆ 15 ಲಕ್ಷ ರೂ ಹಣವನ್ನು ಖಾತೆಗೆ ಹಾಕುವುದಾಗಿ ಹೇಳಿದ್ದರು, ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹಾಗೂ ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಆದರೆ ‘ಮೋದಿ ಸುಳ್ಳಿನ ಸರದಾರ’ ಎಂಬುದನ್ನು ಮೋದಿ ಸಾಬೀತು ಮಾಡಿದ್ದಾರೆ ಎಂದು ಖರ್ಗೆ ಆರೋಪಿಸಿದರು.
ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371ಜೆ ವಿಧಿಯನ್ನು ತಿದ್ದುಪಡಿ ಮಾಡುವಲ್ಲಿ ದಿವಂಗತ ಧರ್ಮ್ ಸಿಂಗ್ ಹಾಗೂ ಕಾಂಗ್ರೆಸ್ ನಾಯಕರ ಪಾತ್ರ ಪ್ರಮುಖವಾಗಿದೆ ಎಂದು ಅವರು ಪ್ರತಿಪಾದಿಸಿದರು.
ಮೋದಿ ಸರ್ಕಾರ ಬರ ಪರಿಹಾರ ಘೋಷಣೆಯಲ್ಲಿ ವಿಳಂಬ ಮಾಡುವ ಮೂಲಕ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು. “ನಾವು ಬರ ಪರಿಹಾರವನ್ನು ಪಡೆಯಲು ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕು. ಇದೀಗ ಕೇಂದ್ರವು ಪರಿಹಾರವಾಗಿ ಅಲ್ಪ ಮೊತ್ತವನ್ನು ಬಿಡುಗಡೆ ಮಾಡಿದೆ. ಈ ವಿಚಾರವನ್ನು ಕರ್ನಾಟಕ ಸುಪ್ರೀಂ ಕೋರ್ಟ್ನ ಗಮನಕ್ಕೆ ತಂದಿದೆ ಎಂದು ಸಿಎಂ ಹೇಳಿದರು. ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಮಾಡುವ ಮೂಲಕ ಮೋದಿ ವಿವಿಧ ಜಾತಿ, ಸಮುದಾಯಗಳ ನಡುವೆ ದ್ವೇಷ ಉಂಟು ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.