ನವದೆಹಲಿ01: ರಾಜ್ಯದಲ್ಲಿ ಬೇಸಿಗೆ ತೀವ್ರಗೊಂಡು ಬರ ಎದುರಾಗಿರುವಾಗ ಕಾವೇರಿ ನೀರಿಗಾಗಿ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದೆ. 2.5 ಟಿಎಂಸಿ ನೀರು ಹರಿಸುವಂತೆ ತಮಿಳುನಾಡು ಆಗ್ರಹಿಸಿದೆ. “ನಮಗೆ ಈ ತಿಂಗಳು ಬರಬೇಕಿರುವ 2.5 ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ತಮಿಳುನಾಡು ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಒತ್ತಾಯಿಸಿದೆ.
ಅಷ್ಟೇ ಅಲ್ಲದೇ ಕರ್ನಾಟಕಕ್ಕೆ ಕುಡಿಯುವುದಕ್ಕೆ 0.5 ಟಿಎಂಸಿ ನೀರು ಸಾಕು, ಕುಡಿಯುವ ನೀರಿನ ನೆಪ ಹೇಳಿ ನೀರು ಬಿಡುಗಡೆಗೆ ನಿರಾಕರಿಸಬಾರದೆಂದು ಸಭೆಯಲ್ಲಿ ವಾದಿಸಿದೆ.
‘ಮಳೆಯ ಕೊರತೆ ಕಾರಣ ನೀಡಿ ಕರ್ನಾಟಕ ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡಿಲ್ಲ, ನಿಗಧಿತ ಪ್ರಮಾಣದ ನೀರು ಹರಿಸಿಲ್ಲ. ಫೆ.1 ರಿಂದ ಏಪ್ರಿಲ್ 28 ವರೆಗೂ ಪರಿಸರಕ್ಕೆ 7.33 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ, ಕರ್ನಾಟಕ 5.31 ಟಿಎಂಸಿ ನೀರು ಮಾತ್ರ ಹರಿಸಿದೆ ಇದರಲ್ಲೂ 2.016 ಟಿಎಂಸಿ ಬಾಕಿ ಉಳಿಸಿಕೊಂಡಿದೆ. ಮೆಟ್ಟೂರಿನಲ್ಲಿ 20 ಟಿಎಂಸಿಯಷ್ಟು ನೀರಿದೆ. ಕುಡಿಯಲು ಮತ್ತು ಪರಿಸರಕ್ಕೆ ಬಳಸಲಾಗುತ್ತಿದೆ. ಬಾಕಿ ಉಳಿಸಿಕೊಂಡ ಪರಿಸರ ಬಳಕೆ ನೀರು ಬಿಡುಗಡೆ ಮಾಡಬೇಕು ಎಂದು ತಮಿಳುನಾಡು ಅಧಿಕಾರಿಗಳು ಬೇಡಿಕೆ ಮುಂದಿಟ್ಟಿದ್ದಾರೆ.
ತಮಿಳುನಾಡಿನ ವಾದಕ್ಕೆ ಕರ್ನಾಟಕ ತೀವ್ರ ವಿರೋಧ ವ್ಯಕ್ತಪಡಿಸಿದೆ. ‘ರಾಜ್ಯದಲ್ಲಿ ಭೀಕರ ಬರದಿಂದ ಕುಡಿಯುವ ನೀರಿನ ಸಮಸ್ಯೆಯಾಗಿದೆ. ನೀರು ಹರಿಸಲು ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲವೆಂದು ವಾದ ಮಂಡಿಸಿದೆ. ರಾಜ್ಯಗಳ ವಾದ ಆಲಿಸಿದ ಕಾವೇರಿ ನೀರು ನಿಯಂತ್ರಣ ಸಮಿತಿ, ಮೇ 16ಕ್ಕೆ ಮತ್ತೊಂದು ಸುತ್ತಿನ ಸಭೆ ನಡೆಸಲು ತೀರ್ಮಾನ ಮಾಡಿದೆ.