ನವದೆಹಲಿ30: ಲೋಕಸಭಾ ಚುನಾವಣೆ ವೇಳೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನ ಕುರಿತು ಸುಪ್ರೀಂ ಕೋರ್ಟ್ ಮಂಗಳವಾರ ಜಾರಿ ನಿರ್ದೇಶನಾಲಯವನ್ನು ಪ್ರಶ್ನಿಸಿದ್ದು, ಇಡಿಯಿಂದ ಪ್ರತಿಕ್ರಿಯೆ ಕೇಳಿದೆ.
ಬಂಧನದ ಸಮಯ ಕುರಿತು ಪ್ರತಿಯಿಸುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರನ್ನು ಕೇಳಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ನ್ಯಾಯಪೀಠ, ಜೀವನ ಮತ್ತು ಸ್ವಾತಂತ್ರ್ಯವು ಅತ್ಯಂತ ಮಹತ್ವದ್ದಾಗಿದ್ದು, ಅದನ್ನು ನೀವು ಅಲ್ಲಗಳೆಯುವಂತಿಲ್ಲ ಎಂದು ಹೇಳಿದೆ.
ಎಸ್ ವಿ ರಾಜುಗೆ ಇತರ ಹಲವು ಪ್ರಶ್ನೆಗಳನ್ನು ಕೇಳಿದ ಪೀಠ, ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರ ಬಂಧನ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆಯ ಮುಂದಿನ ದಿನಾಂಕದಂದು ಉತ್ತರಿಸಲು ತನಿಖಾ ಸಂಸ್ಥೆಗೆ ಸೂಚಿಸಿತು. ಈ ಅರ್ಜಿಯನ್ನು ಬುಧವಾರದಿಂದ ಶುಕ್ರವಾರ ವಿಚಾರಣೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಬಂಧಿಸಿದ ನಂತರ ಪ್ರಸ್ತುತ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಸುಪ್ರೀಂ ಕೋರ್ಟ್ ಏಪ್ರಿಲ್ 15 ರಂದು ಇಡಿಗೆ ನೋಟಿಸ್ ಜಾರಿ ಮಾಡಿತು ಮತ್ತು ಕೇಜ್ರಿವಾಲ್ ಅವರ ಮನವಿಗೆ ಪ್ರತಿಕ್ರಿಯೆ ಕೇಳಿತು. ಏಪ್ರಿಲ್ 9 ರಂದು ಹೈಕೋರ್ಟ್ ಕೇಜ್ರಿವಾಲ್ ಅವರ ಬಂಧನವನ್ನು ಎತ್ತಿಹಿಡಿದಿತ್ತು. ಯಾವುದೇ ಅಕ್ರಮವಾಗಿ ಬಂಧಿಸಿಲ್ಲ, ಪದೇ ಪದೇ ಸಮನ್ಸ್ ನೀಡಿದ್ದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಇಡಿ ಬಂಧಿಸಿರುವುದಾಗಿ ಹೈಕೋರ್ಟ್ ಹೇಳಿತ್ತು.