ಬೆಂಗಳೂರು,30: ಹಾಸನ ಪೆನ್ಡ್ರೈವ್ ವಿಡಿಯೋ ಪ್ರಕರಣ ಖಂಡಿಸಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಮಲ್ಲೇಶ್ವರಂ ಬಿಜೆಪಿ ರಾಜ್ಯ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ಲೈಂಗಿಕ ಹಗರಣದ ವಿಡಿಯೋ ವಿಚಾರವಾಗಿ ಆರೋಪಿ ವಿದೇಶಕ್ಕೆ ಪರಾರಿಯಾಗಲು ಸಹಕರಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಕೈ ಕಾರ್ಯಕರ್ತರು ಯತ್ನಿಸಿದರು. ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ. ವಿ. ಶ್ರೀನಿವಾಸ್ ನೇತೃತ್ವದಲ್ಲಿ ಮುತ್ತಿಗೆ ಯತ್ನ ನಡೆಯಿತು.
ಈ ವೇಳೆ ಪೊಲೀಸರು ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ತಡೆದಿದ್ದು, ಪೊಲೀಸರ-ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ನೂರಾರು ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಲಾಯಿತು. ಬಿಜೆಪಿ, ಪ್ರಧಾನಿ ಮೋದಿ ವಿರುದ್ಧ ಧಿಕ್ಕಾರ ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಆರೋಪಿ ವಿದೇಶಕ್ಕೆ ಹೋಗಲು ಕೇಂದ್ರ ಸರ್ಕಾರ ಸಹಕಾರ ನೀಡಿದೆ ಎಂದು ಆರೋಪಿಸಿ ಧಿಕ್ಕಾರ ಕೂಗಿದರು. ಕೂಡಲೇ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದರು.
ಇತ್ತ ಹಾಸನ ಪೆನ್ಡ್ರೈವ್ ವಿಡಿಯೋ ಆರೋಪ ಹಿನ್ನೆಲೆಯಲ್ಲಿ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ಕಾಲೇಜಿನಲ್ಲಿ NSUI ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ನೂರಾರು ವಿದ್ಯಾರ್ಥಿನಿಯರು ಪ್ರತಿಭಟನೆ ಮೂಲಕ ಆಕ್ರೋಶ ಹೊರಹಾಕಿದರು. ಪ್ರತಿಭಟನೆಯಲ್ಲಿ “ಮಹಿಳೆಯರಿಗೆ ಆಮಿಷ ತೋರಿಸಿ ಹೆಣ್ಣು ಮಕ್ಕಳ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಇತಿಹಾಸದಲ್ಲಿ ಈ ತರಹ ಕೃತ್ಯ ಯಾರೂ ಮಾಡಿಲ್ಲ. 65 ವರ್ಷ ಮಹಿಳೆ ಮೇಲೆ ವಿಕೃತಿ ಮೆರೆದಿದ್ದಾರೆ. ಹಲವು ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಆಗಿದೆ ಎಂಬ ಮಾಹಿತಿ ಇದೆ. ಅವರ ಪೈಕಿ ಬಹುತೇಕರು ಹಿಂದೂಗಳೇ ಆಗಿದ್ದಾರೆ. ಯಾರಾದರು ಮಹಿಳೆಯರೇ, ಅವರಿಗೆ ರಕ್ಷಣೆ ಮಾಡಬೇಕು. ಸಮಾಜದಲ್ಲಿ ಯಾರೇ ಮಾಡಿದರು ತಪ್ಪು ತಪ್ಪೇ. ಅವರನ್ನು ಕೂಡಲೇ ಬಂಧನ ಮಾಡುವಂತೆ ಆಗ್ರಹಿಸಿದರು.