ವಾಷಿಂಗ್ಟನ್27: ಅಮೆರಿಕದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಭಾರತ ಮೂಲದ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಅಮೇರಿಕಾದಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಗುಜರಾತ್ ಮೂಲದ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಗುಜರಾತ್ನ ಆನಂದ್ ಜಿಲ್ಲೆಯ ನಿವಾಸಿಗಳಾದ ರೇಖಾಬೆನ್ ಪಟೇಲ್, ಸಂಗೀತಾಬೆನ್ ಪಟೇಲ್ ಮತ್ತು ಮನೀಶಾಬೆನ್ ಪಟೇಲ್ ಅವರು ದಕ್ಷಿಣ ಕೆರೊಲಿನಾದ ಗ್ರೀನ್ವಿಲ್ಲೆ ಕೌಂಟಿಯಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಅಮೆರಿಕದ ಕೌಂಟಿ ಹೆದ್ದಾರಿಯ ಸೇತುವೆಯ ಮೇಲೆ ಅವರು ವೇಗವಾಗಿ ಎಸ್ಯುವಿ ಕಾರು ಚಲಾಯಿಸುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಕಾರು ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿಯಾಗಿ ಮೇಲಕ್ಕೆ ಹಾರಿದೆ. ಬರೊಬ್ಬರಿ 20 ಅಡಿ ಮೇಲಕ್ಕೆ ಹಾರಿದ ಕಾರು ಬಳಿಕ ಸೇತುವೆ ಬಳಿಯ ಮರಗಳಿಗೆ ಢಿಕ್ಕಿಯಾಗಿ ಅಪ್ಪಳಿಸಿದೆ.
ಕಾರು ಎಲ್ಲ ಟ್ರಾಫಿಕ್ ನಿಯಮಗಳನ್ನು ಮೀರಿ ವೇಗವಾಗಿ ಚಲಿಸುತ್ತಿತ್ತು ಎಂದು ಗ್ರೀನ್ವಿಲ್ಲೆ ಕೌಂಟಿ ಕರೋನರ್ ಆಫೀಸ್ ಮಾಹಿತಿ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಯೊಬ್ಬರು, ‘ಕಾರು ಅತಿ ವೇಗದಲ್ಲಿತ್ತು. ಈ ವೇಳೆ ಕಾರು ಚಾಲಕರ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿಯಾಗಿದೆ. ಈ ಅಪಘಾತದಲ್ಲಿ ಬೇರೆ ಯಾವುದೇ ಕಾರುಗಳು ಭಾಗಿಯಾಗಿಲ್ಲ. ಅಪಘಾತದ ಬಳಿಕ ಕಾರು ಗಾಳಿಯಲ್ಲಿ ಸುಮಾರು 20 ಅಡಿ ಮೇಲಕ್ಕೆ ಹಾರಿ ಮರಗಳ ಮೇಲೆ ಬಿದ್ದಿದೆ. ಕಾರು ಮರದ ಮೇಲೆ ಸಿಲುಕಿಕೊಂಡಿದ್ದು, ಹಲವು ತುಂಡುಗಳಾಗಿ ಛಿದ್ರಗೊಂಡಿದೆ.
ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚೂರುಗಳು ಬಿದ್ದಿದೆ. ದುರಂತದಲ್ಲಿ ಮೂರು ಮಹಿಳೆಯರು ಸಾವನ್ನಪ್ಪಿದ್ದು, ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಿದ್ದಾರೆ.