ಬಳ್ಳಾರಿ,ಏ.27: ಲೋಕಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮತದಾನ ಪ್ರಮಾಣ ಹೆಚ್ಚಿಸಲು ಕಂಪ್ಲಿ ಪಟ್ಟಣದಲ್ಲಿ ಹಲವಾರು ಸ್ವೀಪ್ ಕಾರ್ಯಕ್ರಮಗಳನ್ನು ಆಯೋಜಿಲಾಗುತ್ತಿದ್ದು, ಶುಕ್ರವಾರದಂದು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಮತ್ತು ಕಂಪ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಸ್ವೀಪ್ ಸಮಿತಿ ಹಾಗೂ ಪುರಸಭೆ ವತಿಯಿಂದ ಕಂಪ್ಲಿ ಪಟ್ಟಣದ 4ನೇ ವಾರ್ಡ್ ಚಪ್ಪದರಹಳ್ಳಿಯಲ್ಲಿ ಮತದಾರರ ಮಾರ್ಗದರ್ಶನ ಕೈಪಿಡಿ ವಿತರಿಸಿ ಮತದಾನ ಜಾಗೃತಿ ಮೂಡಿಸಲಾಯಿತು.
ಕಂಪ್ಲಿ ಪುರಸಭೆ ಸಮುದಾಯ ಸಂಘಟನಾಧಿಕಾರಿ ವಸಂತಮ್ಮ ಅವರು ಮಾತನಾಡಿ, ಮೇ 07 ರಂದು ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ನಿಮ್ಮ ಅಕ್ಕ-ಪಕ್ಕದವರಿಗೂ ಮತದಾನ ಮಾಡುವಂತೆ ತಿಳಿಸಬೇಕು ಎಂದರು.
ಮತದಾನ ದಿನದಂದು ಯಾವುದೇ ಕೆಲಸವಿಲ್ಲವೆಂದು ಯಾರೂ ಮತದಾನ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವಂತಿಲ್ಲ. ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ಸಮರ್ಥರನ್ನು ಆಯ್ಕೆ ಮಾಡಬೇಕು. ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನವರಿಕೆ ಮಾಡಿದರು.
ಇದೇ ಸಂದರ್ಭದಲ್ಲಿ ಮತದಾರರ ಪ್ರತಿಜ್ಞೆಯನ್ನು ಬೋಧಿಸಲಾಯಿತು. ಈ ವೇಳೆ ಸಂಪನ್ಮೂಲ ವ್ಯಕ್ತಿಗಳಾದ ರೇಣುಕಾ, ರೋಜಮ್ಮ, ತಾಂತ್ರಿಕ ವಿಭಾಗದ ಸುಧಾಕರ ಸೇರಿದಂತೆ ಮಹಿಳಾ ಗುಂಪುಗಳ ಸದಸ್ಯರು, ಮಹಿಳೆಯರು ಮತ್ತು ಸಾರ್ವಜನಿಕರು ಹಾಜರಿದ್ದರು.