ನವದೆಹಲಿ,25: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನಿತಾ ಕೇಜ್ರಿವಾಲ್ ಅವರನ್ನು ಲೋಕಸಭೆ ಚುನಾವಣಾ ಪ್ರಚಾರ ಅಖಾಡಕ್ಕೆ ಇಳಿಸಲು ಎಎಪಿ ನಿರ್ಧರಿಸಿದೆ.
ದೆಹಲಿ ಮದ್ಯ ಹಗರಣ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈಗ ನ್ಯಾಯಾಂಗ ಬಂಧನಲ್ಲಿದ್ದಾರೆ. ಈ ಹಿನ್ನಲೆ ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಆಪ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ಕುಲದೀಪ್ ಕುಮಾರ್ ಪರ ಕೊಂಡ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ವಾರಾಂತ್ಯ ಸುನಿತಾ ಅವರ ಮೊದಲ ರ್‍ಯಾಲಿ ನಿಗದಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ದೆಹಲಿಯಲ್ಲಿ ಎಎಪಿ ಅಭ್ಯರ್ಥಿಗಳು ಸ್ಪರ್ಧಿಸಿರುವ ಉಳಿದ ಮೂರೂ ಲೋಕಸಭಾ ಕ್ಷೇತ್ರಗಳಲ್ಲೂ ಸುನಿತಾ ರೋಡ್ ಶೋ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಎಎಪಿ, ಪೂರ್ವ ದೆಹಲಿ, ಪಶ್ಚಿಮ ದೆಹಲಿ, ದಕ್ಷಿಣ ದೆಹಲಿ ಮತ್ತು ನವದೆಹಲಿ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಗುಜರಾತ್ ಮತ್ತು ಪಂಜಾಬ್ ರಾಜ್ಯಗಳಲ್ಲೂ ಎಎಪಿ ಅಭ್ಯರ್ಥಿಗಳ ಪರ ಸುನಿತಾ ಪ್ರಚಾರ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುಜರಾತ್‌ನ ಎಎಪಿ ಘಟಕದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲೂ ಸುನಿತಾ ಹೆಸರಿದೆ.
ಕೇಜ್ರಿವಾಲ್ ಅವರನ್ನು ಬಂಧಿಸಿದ ನಂತರ ಸುನೀತಾ ಕೇಜ್ರಿವಾಲ್ ಅವರು ವೀಡಿಯೊ ಸಂದೇಶಗಳು ಮತ್ತು ಪತ್ರಿಕಾಗೋಷ್ಠಿಗಳ ಮೂಲಕ ಮುನ್ನಲೆಗೆ ಬಂದಿದ್ದಾರೆ. ಕೇಜ್ರಿವಾಲ್ ಬಂಧನ ಖಂಡಿಸಿ ದೆಹಲಿಯಲ್ಲಿ ವಿಪಕ್ಷಗಳು ನಡೆಸಿದ ಸಮಾವೇಶದಲ್ಲಿ ಭಾಗಿಯಾಗಿ ಭಾಷಣ ಮಾಡಿದ್ದರು. ಇತ್ತಿಚೇಗೆ ಛತ್ತಿಸ್‌ಘಡದಲ್ಲಿ ನಡೆದ INDIA ಒಕ್ಕೂಟದ ಸಭೆಯಲ್ಲಿ ಅವರು ಪಕ್ಷವನ್ನು ಪ್ರತಿನಿಧಿಸಿದ್ದರು.