ಗೋಕಾಕ,25: ಈ ಬಾರಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಪಕ್ಷಾತೀತವಾಗಿ ಜನರು ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಅವರನ್ನು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸಲಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗೋಕಾಕದಲ್ಲಿ ಪ್ರಚಾರದಲ್ಲಿರುವ ಸಚಿವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಕ್ಷೇತ್ರದ ಎಲ್ಲ ಭಾಗಗಳಿಗೆ ನಾವು ಭೇಟಿ ನೀಡಿ ಮತ ಯಾಚಿಸಿದ್ದೇವೆ. ಪ್ರತಿ ತಾಲೂಕಿನಲ್ಲಿ ಎರಡು ಸುತ್ತಿನ ಪ್ರಚಾರ ನಡೆಸಲಾಗಿದೆ.
ಬಹುತೇಕ ಎಲ್ಲ ಸಂಘಟನೆಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ಹಿಂದೆ ನಾನು ಅನೇಕ ಚುನಾವಣೆಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಂಬಲವನ್ನು ಹಿಂದೆಂದೂ ಕಂಡಿರಲಿಲ್ಲ. ಪಕ್ಷ ಭೇಧ ಮರೆತು ಎಲ್ಲರೂ ಸಹಕಾರ ನೀಡುವ ಭರವಸೆ ನೀಡುತ್ತಿದ್ದಾರೆ. ಈ ಬಾರಿ ಬಿಜೆಪಿ ಅಭ್ಯರ್ಥಿ ಕುರಿತು ಅವರ ಪಕ್ಷದವರೇ ಅಸಮಾಧಾನ ಹೊರಹಾಕುತ್ತಿದ್ದಾರೆ. ಬೆಳಗಾವಿ ಅಭಿವೃದ್ಧಿಯಾಗಬೇಕಾದರ ಸ್ಥಳೀಯ ಅಭ್ಯರ್ಥಿ ಬೇಕು, ಯುವ ಉತ್ಸಾಹಿ ಸಂಸದನಾಗಬೇಕು ಎನ್ನುವುದು ಎಲ್ಲರ ಅಭಿಪ್ರಾಯ. ಹಾಗಾಗಿ ಮೃಣಾಲ ಹೆಬ್ಬಾಳಕರ್ ಅವರಿಗೆ ಪಕ್ಷ, ಜಾತಿ, ಪ್ರದೇಶ ಯಾವುದೇ ಭೇದವಿಲ್ಲದೆ ಬೆಂಬಲ ಸಿಗಲಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ವಿಶ್ವಾಸ ವ್ಯಕ್ತಪಡಿಸಿದರು.
ನಾವು ಎಲ್ಲೂ ನಮ್ಮ ಘನತೆಯನ್ನು ಮೀರಿ ಮಾತನಾಡಿಲ್ಲ. ಅತ್ಯಂತ ಸೌಜನ್ಯತೆಯಿಂದಲೇ ಮತ ಯಾಚನೆ ಮಾಡುತ್ತಿದ್ದೇವೆ. ಯಾರ ಬಗೆಗೂ ಕೀಳಾಗಿ ಮಾತನಾಡಿಲ್ಲ. ನಮಗೆ ಸಿಗುತ್ತಿರುವ ಬೆಂಬಲ ನೋಡಿ ಅವರು ಹತಾಶರಾಗಿದ್ದಾರೆ. ಸೋಲಿನ ಭೀತಿಯಿಂದ ವಿರೋಧಿಗಳು ಈ ಕುರಿತು ಅಪಪ್ರಚಾರ ಮಾಡುತ್ತಿರಬಹುದು ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.
ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಕುರಿತು ಆರಂಭದಿಂದಲೂ ಅವರ ಪಕ್ಷದವರೇ ವಿರೋಧ ಮಾಡುತ್ತಿದ್ದಾರೆ. ಗೋ ಬ್ಯಾಕ್ ಶೆಟ್ಟರ್ ಅಭಿಯಾನ ಮಾಡಿದವರು ಅವರ ಪಕ್ಷದವರೇ. ಅವರು ಮುಖ್ಯಮಂತ್ರಿಯಾಗಿದ್ದಾಗ, ಕೈಗಾರಿಕೆ ಸಚಿವರಾಗಿದ್ದಾಗ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಬೆಳಗಾವಿಗೆ ಅವರ ಕೊಡುಗೆ ಶೂನ್ಯ. ಅಷ್ಟೇ ಅಲ್ಲ ಪ್ರತಿ ಸಂದರ್ಭದಲ್ಲಿ ಅವರು ಹುಬ್ಬಳ್ಳಿ -ಧಾರವಾಡ ಪರವಾಗಿ ನಿಂತು ಬೆಳಗಾವಿಗೆ ಸಾಕಷ್ಟು ಅನ್ಯಾಯ ಮಾಡಿದ್ದಾರೆ ಎಂದು ಜನರೇ ಹೇಳುತ್ತಿದ್ದಾರೆ. ಉದ್ಯಮಿಗಳನ್ನು ಕೇಳಿ, ವಿವಿಧ ಸಂಘಟನೆಗಳನ್ನು ಕೇಳಿ ಎಲ್ಲರೂ ಅವರಿಂದ ಬೆಳಗಾವಿಗೆ ಎಂದೂ ನ್ಯಾಯ ಸಿಕ್ಕಿಲ್ಲ ಎಂದೇ ಹೇಳುತ್ತಿದ್ದಾರೆ. ಜನರು ಹೇಳುತ್ತಿರುವುದನ್ನು ನಾನು ಪ್ರಚಾರದ ವೇಳೆ ಕೆಲವೆಡೆ ಉಲ್ಲೇಖಿಸಿದ್ದೇನೆ. ಅಂತವರಿಗೆ ಮತ ನೀಡಿ ಆರಿಸಿ ಕಳಿಸಿದರೆ ನಮಗೆ ನ್ಯಾಯ ಸಿಗಲು ಸಾಧ್ಯವೇ ಇಲ್ಲ ಎನ್ನುವುದು ಜನರಿಗೆ ಮನವರಿಕೆಯಾಗಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಈ ಬಾರಿ ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಅಭೂತಪೂರ್ವ ಒಗ್ಗಟ್ಟು ಕಾಣಿಸುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನಾಯಕತ್ವದಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿ ಎರಡೂ ಕ್ಷೇತ್ರದಲ್ಲಿ ವ್ಯವಸ್ಥಿತವಾಗಿ ಪ್ರಚಾರ ಕಾರ್ಯ ನಡೆಯುತ್ತಿದೆ. ಎಲ್ಲ ತಾಲೂಕುಗಳಲ್ಲಿ ಶಾಸಕರಿಂದ ಹಿಡಿದು ಬೂತ್ ಮಟ್ಟದ ಕಾರ್ಯಕರ್ತರವರೆಗೆ ಎಲ್ಲರೂ ಅತ್ಯಂತ ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಅನ್ಯ ಪಕ್ಷದವರೂ ನಮಗೆ ಬೆಂಬಲ ಸೂಚಿಸುತ್ತಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಾವು ಕೆಲಸ ಮಾಡುತ್ತಿದ್ದೇವೆ. ದಿನದಿಂದ ದಿನಕ್ಕೆ ನಮ್ಮ ಆತ್ಮ ವಿಶ್ವಾಸ ಹೆಚ್ಚಾಗುತ್ತಿದೆ. ಬಹಳ ದೊಡ್ಡ ಪ್ರಮಾಣದಲ್ಲಿ ನಮಗೆ ಲೀಡ್ ಸಿಗುವ ವಿಶ್ವಾಸವಿದೆ ಎಂದು ಸಚಿವರು ತಿಳಿಸಿದರು.
ಮೃಣಾಲ ಹೆಬ್ಬಾಳಕರ್ ಕಳೆದ 11 ವರ್ಷಗಳಿಂದ ರಾಜಕೀಯ ಹಾಗೂ ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದಾನೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಜನರೊಂದಿಗಿನ ಸಂಬಂಧ, ಅವರ ಕಷ್ಟಗಳಿಗೆ ಸ್ಪಂದಿಸುವ ರೀತಿ ನೋಡಿ ಜನರು ಮನೆ ಮಗನೆಂದೇ ನೋಡುತ್ತಿದ್ದಾರೆ. ಅತ್ಯಂತ ಸುಸಂಸ್ಕೃತ ಗುಣ ರೂಢಿಸಿಕೊಂಡಿದ್ದಾನೆ. ವಿದ್ಯಾವಂತನಿದ್ದಾನೆ. ಜಿಲ್ಲೆಯ ಅಭಿವೃದ್ಧಿಗೆ ಹಲವಾರು ಕನಸುಗಳನ್ನು ಕಟ್ಟಿಕೊಂಡಿದ್ದಾನೆ. ಜಿಲ್ಲೆಯ ಸಮಸ್ಯೆ, ಬೇಡಿಕೆಗಳ ಕುರಿತು ಸಮಗ್ರ ಅಧ್ಯಯನ ಮಾಡಿದ್ದಾನೆ. ಹಾಗಾಗಿ ಒಬ್ಬ ಒಳ್ಳೆಯ ಸಂಸದನಾಗುವ ವಿಶ್ವಾಸ ಮೂಡಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.