ಬೈಲಹೊಂಗಲ 24: ತಾಲೂಕಿನ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ಹಾಗೂ ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ
ಮಂಡಳಿ, ಹುಬ್ಬಳ್ಳಿ ಇವರ ಸಹಯೋಗದಲ್ಲಿ ರೈತರಿಗೆ ಬೆಳಗಾವಿ ಜಿಲ್ಲೆಯ ಪ್ರಮುಖ ಸಾಂಬಾರು ಬೆಳೆಗಳ ಉತ್ಪಾದನೆ ಹಾಗೂ ಮೌಲ್ಯವರ್ಧನೆ ಕುರಿತು
ಒಂದು ದಿನದ ತರಬೇತಿಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಪರಿಚಯ ಮಾಡಿಕೊಟ್ಟ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿಗಳಾದ ಶ್ರೀ ಪ್ರವೀಣ ಯಡಹಳ್ಳಿ, ಸಾಂಬಾರು ಬೆಳೆಗಳ ಉತ್ಪಾದನೆ ಹಾಗೂ ಬಳಕೆಯಲ್ಲಿ ಭಾರತವು ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ, ಸಾಂಬಾರು ಪದಾರ್ಥಗಳ ಬಳಕೆ ಯಿಂದ ಅಡುಗೆ ರುಚಿ, ಬಣ್ಣ ಹಾಗೂ ಸುವಾಸನೆ ವೃದ್ಧಿಸುವುದಲ್ಲದೆ ರೋಗ ನಿರೋಧಕ ಶಕ್ತಿಯನ್ನು ಕೂಡಾ ಅವುಗಳು ಹೊಂದಿವೆ ಎಂದು ತಿಳಿಸಿದರು.
ನಾವು ಬಳಸುವ ಪ್ರತಿದಿನದ ಅಡುಗೆಯಲ್ಲಿ ಸಾಂಬಾರು ಬೆಳೆಗಳ/ಪದಾರ್ಥಗಳ ಪಾತ್ರ ಮುಖ್ಯವಾದದ್ದು ಹಾಗೆಯೇ ಅವುಗಳ ಉತ್ಪಾದನೆ ಮತ್ತು ಮೌಲ್ಯವರ್ಧನೆ ವೃದ್ಧಿಯಲ್ಲಿ ಕೂಡ ರೈತರು ಹೆಚ್ಚಿನ ತರಬೇತಿಗಳನ್ನು ಪಡೆಯುವುದು ಮುಖ್ಯವಾಗಿದೆ. ಕಾರಣ ಬೆಳಗಾವಿ ಜಿಲ್ಲೆಯ ರೈತರ ಅನುಕೂಲಕ್ಕಾಗಿ ಸದರ ತರಬೇತಿಯನ್ನು ಆಯೋಜಿಸಲಾಗಿದೆ ಎಂದರು.
ತರಬೇತಿಯನ್ನು ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ಹುಬ್ಬಳ್ಳಿಯ ಸಹಾಯಕ ನಿರ್ದೇಶಕರಾದ ಶ್ರೀ ಉದಯಕುಮಾರ
ಎಮ್. ಕದಂ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಾಂಬಾರು ಮಂಡಳಿಯ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ತಿಳಿಸಿ
ನಂತರ ಮಣ್ಣು ಮತ್ತ್ತು ವಾತಾವರಣಕ್ಕನುಗುಣವಾಗಿ ವಿವಿಧ ಸಾಂಬಾರು ಬೆಳೆಗಳಾದ ಬೆಳ್ಳೂಳ್ಳಿ, ಅರಿಶಿಣ, ಹುಣಸೆ, ಅಜವಾನ್, ಮೆಂತೆ ಕಾಳು, ಒಣ ಮೆಣಸಿನಕಾಯಿ ಇತ್ಯಾದಿ ಬೆಳೆಗಳನ್ನು ಬೆಳೆದು ರೈತರು ಹೆಚ್ಚಿನ ಆದಾಯವನ್ನು ಗಳಿಸಬಹುದು ಎಂದು ಅಭಿಪ್ರಾಯಪಟ್ಟರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಶ್ರೀದೇವಿ ಬ. ಅಂಗಡಿ ಮಾತನಾಡಿ, ನೇಸರಗಿ ಗ್ರಾಮದ ಸುತ್ತಮುತ್ತಲಿನ ರೈತರು ಹೆಚ್ಚಿನ ಕ್ಷೇತ್ರದಲ್ಲಿ ಬೆಳ್ಳೂಳ್ಳಿ ಬೆಳೆ ಬೆಳೆಯುತ್ತಿದ್ದು ಇದರ ಮಾರುಕಟ್ಟೆ ದರ ಕಡಿಮೆ ಇದ್ದಾಗ ಸ್ವಸಹಾಯ ಗುಂಪುಗಳು ಹಾಗೂ ರೈತ ಉತ್ಪಾದಕ ಸಂಸ್ಥೆಗಳಿಂದ ಇದರ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಹೆಚ್ಚಿನ ದರ ಪಡೆಯಬಹುದು ಎಂದು ತಿಳಿಸಿದರು.
ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯಿಂದ ಆಗಮಿಸಿದ ಡಾ. ಶಶಿಧರ ದೊಡಮನಿ, ಸಹಾಯಕ ಪ್ರಾಧ್ಯಾಪಕ ಬೆಳ್ಳೂಳ್ಳಿ ಹಾಗೂ ಇತರೆ ಪ್ರಮುಖ
ಸಾಂಬಾರು ಬೆಳೆಗಳ ಉತ್ಪಾದನೆ ತಾಂತ್ರಿಕತೆ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿ, ಡಾ. ಎಸ್. ಎಸ್. ಹಿರೇಮಠ, ಕೀಟ
ಹಾಗೂ ರೋಗಗಳ ಹತೋಟಿ ಕ್ರಮಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲ ತಜ್ಞರು ಹಾಗೂ ರೈತರು ಮುಂದಿನ ದಿನಗಳಲ್ಲಿ ಬೆಳಗಾವಿ ಜಿಲ್ಲೆಯ ಸಾಂಬಾರು ಬೆಳೆಗಳ ವಿಸ್ತೀರ್ಣ ಹಾಗೂ ಮೌಲ್ಯವರ್ಧನೆ ಕುರಿತು ಚರ್ಚಾಗೋಷ್ಠಿ ನಡೆಸಿದರು.
ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಸಹಾಯಕ ತೋಟಗಾರಿಕೆ ಅಧಿಕಾರಿ ಆನಂದ ಕಡೆಮನಿ ಹಾಗೂ ಕೇಂದ್ರದ ವಿಜ್ಞಾನಿ ಜಿ. ಬಿ. ವಿಶ್ವನಾಥ
ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಜ್ಞಾನಿ ಎಸ್. ಎಮ್. ವಾರದ ಸ್ವಾಗತಿಸಿದರು ಹಾಗೂ ವಿಜ್ಞಾನಿ ಪ್ರವೀಣ ಯಡಹಳ್ಳಿ ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ ೧೦೦ ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.