ತಿರುವನಂತಪುರಂ,24: ಪ್ರಧಾನಿ ನರೇಂದ್ರ ಮೋದಿ ಅವರು ಕ್ಷುಲ್ಲಕ ರಾಜಕಾರಣಿಯಂತೆ ವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಮುಗಿದ ನಂತರ ಮೋದಿ ವಿಚಲಿತರಾಗಿದ್ದಾರೆ ಮತ್ತು “ಗೋಚರಿಸದ ಮತದಾರರ” ಬಗ್ಗೆ ಆತಂಕಗೊಂಡಿದ್ದಾರೆ. ಹೀಗಾಗಿ ಧಾರ್ಮಿಕ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಇಂದು ಇಂದಿರಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ‘ಕಾಂಗ್ರೆಸ್ ಅವರಿಗೆ ಏನೂ ಅಲ್ಲ, ಪ್ರಧಾನಿ ಮೋದಿ ನಮ್ಮ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳಬೇಕು’ ಎಂದು ಪ್ರಶ್ನಿಸಿದರು.
ಮಂಗಳವಾರ ತಡರಾತ್ರಿ ತಿರುವನಂತಪುರಂ ಆಗಮಿಸಿದ ಖರ್ಗೆ ಅವರು, ಎರಡು ವರ್ಷಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಇಂದಿರಾ ಭವನಕ್ಕೆ ಭೇಟಿ ನೀಡಿದರು.
2019 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಎಲ್ಲಾ ಭಾರತೀಯರ ಬ್ಯಾಂಕ್ ಖಾತೆಗಳಿಗೆ ತಲಾ 15 ಲಕ್ಷ ರೂಪಾಯಿ ಜಮೆ ಮಾಡುವುದಾಗಿ ಮೋದಿಯವರು ಹೇಳಿದ್ದರು. ಆದರೆ ದೊಡ್ಡ ಸುಳ್ಳು ಎಂದು ಗೊತ್ತಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷರು ಟೀಕಿಸಿದರು.
ಎರಡು ಕೋಟಿ ಉದ್ಯೋಗ ಸೃಷ್ಟಿಯಾಗಲಿದೆ ಎಂಬ ಮೋದಿಯವರ ಹೊಸ ಭರವಸೆಯೂ ಕನಸಾಗಿಯೇ ಉಳಿಯಲಿದೆ ಎಂದು ಖರ್ಗೆ ಟೀಕಿಸಿದರು.
“ಮೋದಿ ಹತಾಶರಾಗಿದ್ದಾರೆ. ನಾನು ಚುನಾವಣಾ ಪ್ರಚಾರಕ್ಕಾಗಿ 10-12 ರಾಜ್ಯಗಳಲ್ಲಿ ಪ್ರವಾಸ ಮಾಡಿದ್ದೇನೆ ಮತ್ತು ಸಾರ್ವಜನಿಕರಿಂದ ಮತ್ತು ಮತದಾರರಿಂದ ಉತ್ತಮ ವರದಿಗಳನ್ನು ಪಡೆಯುತ್ತಿದ್ದೇನೆ. ಮೋದಿಯವರು ನಮ್ಮ ದೇಶದ ಇತಿಹಾಸದ ಬಗ್ಗೆ ಹೆಚ್ಚು ಓದಬೇಕು ಮತ್ತು ವಿಭಜಕ ರಾಜಕೀಯದಿಂದ ದೇಶವನ್ನು ಹೇಗೆ ಒಗ್ಗೂಡಿಸಬೇಕೆಂದು ಕಲಿಯಬೇಕು ಎಂದು ಹೇಳಿದರು.
“ಮೋದಿ ಬಳಿ ಬೃಹತ್ ವಾಷಿಂಗ್ ಮೆಷಿನ್ ಸಿಕ್ಕಿದೆ” ಎಂದ ಅವರು, ಬಿಜೆಪಿ ಸೇರುವ ಕಾಂಗ್ರೆಸ್ ನಾಯಕರಿಗೆ ಭ್ರಷ್ಟಾಚಾರ ಪ್ರಕರಣಗಳಿಂದ “ಕ್ಲೀನ್ ಚಿಟ್” ನೀಡಲಾಗುತ್ತಿದೆ ಎಂದು ಖರ್ಗೆ ಆರೋಪಿಸಿದರು.