ಹಾಸನ, ಏಪ್ರಿಲ್ 24: ಹಾಸನದಲ್ಲಿ ಬಿಜೆಪಿಯ ಕೆಲವರ ಸಹಕಾರವಿಲ್ಲ, ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ ಎಂದು ಹೇಳಿದ್ದಾರೆ. ಆ ಮೂಲಕ ಮೈತ್ರಿಯಲ್ಲಿ ಇನ್ನೂ ಪೂರ್ಣ ಒಮ್ಮತ ಮೂಡದಿರುವ ಬಗ್ಗೆ ಸುಳಿವು ನೀಡಿದ್ದಾರೆ. ಆದಾಗ್ಯೂ, ಮೈತ್ರಿ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ಬಿಜೆಪಿಯ ಕೆಲವರು ವಿರೋಧ ಮಾಡುತ್ತಿದ್ದಾರೆ ಎಂದು ನೀವು ಕೇಳಬಹುದು. ನಾವು ಈ ಭಾಗದ ಎಲ್ಲಾ ಕ್ಷೇತ್ರದಲ್ಲಿ ಗೆಲ್ಲುವ ಸಾಧ್ಯತೆ ಇದೆ. ಹಾಸನದಲ್ಲಿ ಬಿಜೆಪಿಯ ಕೆಲವು ವ್ಯಕ್ತಿಗಳು ಸಹಕಾರ ನೀಡದೇ ಇರುವುದು ನಿಜ. ಮಂಡ್ಯದಲ್ಲಿ ಕುಮಾರಸ್ವಾಮಿಗೆ ಸುಮಲತಾ ಸಹಾಯ ಮಾಡಿಲ್ಲ. ಹಾಗೆಂದು ಅದರಿಂದ ಕುಮಾರಸ್ವಾಮಿಗೆ ಬಹಳ ಅಪಾಯ ಆಗಿಬಿಡುತ್ತದೆ ಎನ್ನೋ ಹಾಗಿಲ್ಲ ಎಂದು ದೇವೇಗೌಡರು ಹೇಳಿದರು.
ಕಳೆದ ಎರಡು ದಿನಗಳಿಂದ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ದೊಡ್ಡ ಹೋರಾಟ ನಡೆದಿದೆ. ಸಂಪತ್ತು ಹಂಚಿಕೆ ಬಗ್ಗೆ ಎರಡು ಪಕ್ಷಗಳ ನಡುವ ದೊಡ್ಡ ಚರ್ಚೆ ನಡೆದಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹಲವು ವಿಚಾರ ಹೇಳಿದೆ. ಅವರು ಹೇಗಾದರೂ ಸರಿ, ಅಧಿಕಾರಿಕ್ಕೆ ಬರಬೇಕು ಎಂದು ಹೊರಟಿದ್ದಾರೆ. ಸಂಪತ್ತಿನ ಸರ್ವೇ ಹಾಗೂ ಹಂಚಿಕೆ ಬಗ್ಗೆ ರಾಹುಲ್ ಗಾಂಧಿ ಮಾತನಾಡಿದ್ದಾರೆ. ರಾಹುಲ್ ಗಾಂಧಿ ಪಾಪ ಎಂದು ದೇವೇಗೌಡ ಲೇವಡಿ ಮಾಡಿದ್ದಾರೆ.
ನಾನು ಕಾವೇರಿ ಭಾಗದ ಎಲ್ಲ ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದೇನೆ. ಪ್ರಧಾನಿ ಮೋದಿ ಅವರ ಜೊತೆ ಎರಡು ಸಭೆಗಳಲ್ಲಿ ಭಾಗಿಯಾಗಿದ್ದೇನೆ. ಎರಡನೆ ಹಂತದ ಚುನಾವಣೆ ಭಾಗದಲ್ಲೂ ಪ್ರಚಾರ ನಡೆಸುತ್ತೇನೆ. ಮೊದಲ ಹಂತದ ಚುನಾವಣೆಯ ಈ ಭಾಗದಲ್ಲಿ ಬಿಜೆಪಿ ಜೆಡಿಎಸ್ ಸೇರಿ ಪ್ರಚಾರ ಮಾಡುತ್ತಿದ್ದೇವೆ. ಕಾವೇರಿ ಹೋರಾಟ ಜೀವನ್ಮರಣದ ಪ್ರಶ್ನೆ. ಹಾಗಾಗಿಯೇ ನಾವು 28ಕ್ಕೆ 28 ಸ್ಥಾನ ಗೆಲ್ತೇವೆ. ಮೋದಿಯವರು ಡಿಎಂಕೆ ಹಂಗಿನಿಂದ ದೇಶ ಆಳುವ ಪರಿಸ್ಥಿತಿ ಬರುವುದಿಲ್ಲ. ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯಲಿದೆ ಎಂದು ದೇವೇಗೌಡ ಆಶಯ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಸ್ಲಿಮರಿಗೆ ಸಂಪತ್ತು ಹಂಚಲು ಹೊರಟಿದೆ ಎಂಬ ಪ್ರಧಾನಿ ಮೋದಿ ಹೇಳಿಕೆ ವಿಚಾರವಾಗಿ ಕೇಳಲಾದ ಪ್ರಶ್ನೆಗೆ, ಈ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ನಾನು ಚಿಕ್ಕ ಮಗು ಅಲ್ಲ ಎಂದು ಮಾದ್ಯಮಗಳ ವಿರುದ್ಧವೇ ಗರಂ ಆದರು.
ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಎಲ್ಲಿ ನೋಡಿದರೂ ಜನ ಸಾಗರ. ಅಲ್ಲಿ ನಾನು ನಿನ್ನೆ ಏಳು ಸಭೆ ಮಾಡಿದ್ದೇನೆ. ಆ ಜನ ಸಾಗರದ ನಡುವೆ ಒಂದೊಂದು ಸಭೆ ಮೂರು ಗಂಟೆ ತಡವಾಗಿದೆ. ಅವರು (ಕಾಂಗ್ರೆಸ್) ದುಡ್ಡಿನ ಹೊಳೆ ಹರಿಸಿದರೂ ಗೆಲ್ಲುವುದು ನಾವೇ ಎಂದು ದೇವೇಗೌಡರು ಹೇಳಿದರು.