ಬೆಳಗಾವಿ24: ಮಹಿಳೆಯರ ಸಂಕಷ್ಟ ಅರಿತು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅವರ ಕಣ್ಣೀರು ಒರೆಸುವ ಕಾರ್ಯ ಮಾಡಿದ್ದು, ಮಹಿಳೆಯರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ನನಗೆ ಮತ ನೀಡಬೇಕು ಎಂದು ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಹೇಳಿದರು.
ಹುಕ್ಕೇರಿ ವಿಧಾನಸಭಾ ಮತಕ್ಷೇತ್ರದ ಕಣಗಲಾ, ಸಂಕೇಶ್ವರ, ಅಮ್ಮಣ್ಣಗಿಯಲ್ಲಿ ಕೈಗೊಂಡ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಈ ಲೋಕಸಭಾ ಚುನಾವಣೆಯಲ್ಲಿ ಮತದಾರರ ಪಾತ್ರ ದೊಡ್ಡದಿದ್ದು, ಕಾಂಗ್ರೆಸ್ ಪಕ್ಷ ಪುರುಷರಿಗೆ ಮಾತ್ರವಲ್ಲದೇ ಮಹಿಳೆಯರಿಗೂ ಟಿಕೆಟ್ ನೀಡಿ ಮಹಿಳೆಯರ ಪರವಾಗಿ ನಿಂತಿದೆ. ಹೀಗಾಗಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ನನಗೆ ಮತದಾನ ನೀಡಿ ಕ್ಷೇತ್ರದ ಅಭಿವೃದ್ದಿಗೆ ನನಗೆ ಆಶೀರ್ವಾದ ಮಾಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ಬಡವರು ಸ್ವಾಭಿಮಾನದಿಂದ ಬದುಕು ನಡೆಸಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗಳು ಬಡವರ ಬದುಕಿಗೆ ನೆಮ್ಮದಿಯನ್ನು ತಂದಿದೆ. ಸಂವಿಧಾನದ ಆಶಯಗಳು ಜಾರಿಯಾಗಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಕಾಂಗ್ರೆಸ್ ಪಕ್ಷ ಜನರ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಪರವಾಗಿ ಇದೆ. ಆದರೆ, ಬಿಜೆಪಿಗೆ ಸಂವಿಧಾನದ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಟೀಕಿಸಿದರು.
ರಾಜಕಾರಣದ ಮೂಲಕ ಸಮಾಜ ಸೇವೆ ಮಾಡುವುದರ ಜೊತೆಗೆ ಶಿಕ್ಷಣ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆಗೈಯಲು ಬಯಸುವ ಯುವಕರಿಗೆ ತಮ್ಮ ಫೌಂಡೇಷನ್ ಮೂಲಕ ಸಹಾಯ ಸಹಕಾರ ನೀಡುವ ನಮ್ಮ ತಂದೆ ಸತೀಶ ಜಾರಕಿಹೊಳಿ ಅವರು ನನಗೆ ಆದರ್ಶ. ಅವರ ದಾರಿಯಲ್ಲೇ ನಡೆದು ಮತಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನಿಮ್ಮ ಮನೆಯ ಮಗಳಾದ ನನಗೂ ಸಹ ನಮ್ಮ ತಂದೆಯವರಿಗೆ ನೀಡಿದ ಬೆಂಬಲ, ಅಭಿಮಾನವನ್ನು ನೀಡಿ ಎಂದ ಅವರು, ಕಳೆದ 15 ವರ್ಷದಿಂದ ರಾಜಕೀಯದಲ್ಲಿ ಸಕ್ರಿಯರಾಗಿರುವ ತಂದೆ ಸತೀಶ ಜಾರಕಿಹೊಳಿ ಅವರು ತಮ್ಮ ಮತಕ್ಷೇತ್ರದ ಗ್ರಾಮಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಶಾಲಾ ಕಾಲೇಜುಗಳನ್ನು ನಿರ್ಮಿಸಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದಾರೆ. ನನಗೂ ಇದೇ ರೀತಿಯಲ್ಲಿ ಜನರ ಸೇವೆ ಮಾಡುವ ಬಯಕೆಯಿದೆ. ಆದ್ದರಿಂದ ಮತದಾರರು ನನಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಒಂಬತ್ತು ತಿಂಗಳ ಒಳಗೆ ಐದು ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿದೆ. ಪ್ರತಿಯೊಂದು ಕುಟುಂಬಗಳಿಗೆ ನಾಲ್ಕರಿಂದ ಐದು ಸಾವಿರ ಹಣ ಉಳಿತಾಯವಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಿಂದ ಪ್ರತಿಯೊಂದು ಮನೆಯ ಗೃಹಿಣಿಯರು 2000 ಪಡೆದುಕೊಳ್ಳುತ್ತಿದ್ದಾರೆ. ವಿಧ್ಯುತ್ ಅನ್ನು ಉಚಿತವಾಗಿ ಪಡೆದುಕೊಳ್ಳುತ್ತಿದ್ದಾರೆ. ಶಕ್ತಿ ಯೋಜನೆಯಡಿ ಉಚಿತವಾಗಿ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ. ಅನ್ನಭಾಗ್ಯದಲ್ಲಿ 5 ಕೆಜಿ ಅಕ್ಕಿ 5 ಕೆ.ಜಿ ಗೆ ಹಣವನ್ನು ಪಡೆಯುತ್ತಿದ್ದಾರೆ. ಆದ್ದರಿಂದ ಈ ಭಾರಿ ಕ್ಚೇತ್ರ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.