ಹೊಸಕೋಟೆ, ಏ, 23; ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಅಂತಿಮಗೊಳ್ಳಲು 48 ಗಂಟೆಗಳು ಬಾಕಿ ಇರುವಂತೆ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಾ ರಾಮಯ್ಯ ಭರ್ಜರಿ ರೋಡ್ ಶೋ ನಡೆಸಿದರು.
ಶಾಸಕರಾದ ಶರತ್ ಬಚ್ಚೇಗೌಡರ ನೇತೃತ್ವದಲ್ಲಿ ಹೊಸಕೋಟೆ ಟೌನ್ ಮತ್ತು ಕಸಬಾ ಹೋಬಳಿಯಲ್ಲಿ ವ್ಯಾಪಕ ಪ್ರಚಾರ ನಡೆಸಿದರು. ಶ್ರೀವಾರಿ ಕಲ್ಯಾಣ ಮಂಟಪದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮತಯಾಚಿಸಿದರು.
ಅನುಗೊಂಡನಹಳ್ಳಿ ಹೋಬಳಿಯ ದೊಡ್ಡ ದುನ್ನ ಸಂದ್ರ ಕ್ರಾಸ್ ನಲ್ಲಿ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಚಿಕ್ಕಬಳ್ಳಾಪುರಕ್ಕೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಎತ್ತಿನಹೊಳೆ ಯೋಜನೆ ಜಾರಿ. ಕೆ.ಸಿ.ವ್ಯಾಲಿ ಯೋಜನೆಯಡಿ ಮೂರನೇ ಹಂತದ ಶುದ್ದೀಕರಣಕ್ಕೆ ಆದ್ಯತೆ, ಕೈಗಾರಿಕೆಗಳ ಸ್ಥಾಪನೆಗೆ ಒತ್ತು. ಚಿಕ್ಕಬಳ್ಳಾಪುರವನ್ನು ದೇಶದ ಪುಷ್ಪೋದ್ಯಮದ ರಾಜಧಾನಿ ಮಾಡುವ ಗುರಿ, ಕೇಂದ್ರ ಸರ್ಕಾರದ ವೈಫಲ್ಯಗಳು. ಬೆಲೆ ಏರಿಕೆ, ಯುವ ಜನಾಂಗದ ನಿರೀಕ್ಷೆಗಳು. ಏಐಸಿಸಿ ನೀಡಿರುವ ಭರವಸೆಗಳು ಹೀಗೆ ಹತ್ತು ಹಲವು ಸಮಗ್ರ ವಿಚಾರಗಳನ್ನು ಮುಂದಿಟ್ಟುಕೊಂಡು ಮತಯಾಚಿಸುತ್ತಿದ್ದೇನೆ. ತಮಗೆ ಈ ಬಾರಿ ಮತ ನೀಡಿ ಗೆಲ್ಲಿಸುವಂತೆ ವಿನಮ್ರವಾಗಿ ಮನವಿ ಮಾಡಿದರು.
ಚಿಕ್ಕಬಳ್ಳಾಪುರ ಕ್ಷೇತ್ರದ ಅಭಿವೃದ್ಧಿ ನಮ್ಮ ಹೊಣೆ. ಮನೆಯ ಮಗನಾಗಿ ಅಭಿವೃದ್ಧಿಯ ಜವಾಬ್ದಾರಿಯ ನೊಗ ಹೊರುತ್ತೇನೆ. ನಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕರ ಜೊತೆಗೆ ಭುಜಕ್ಕೆ ಭುಜ ಕೊಟ್ಟು ಕೆಲಸ ಮಾಡುತ್ತೇನೆ. ಸಂಸತ್ತಿನಲ್ಲಿ ಕ್ಷೇತ್ರ ಮತ್ತು ರಾಜ್ಯದ ಧ್ವನಿಯಾಗಿ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ, ನ್ಯಾಯಯುತ ಪಾಲು ಪಡೆಯಲು ಶ್ರಮಿಸುತ್ತೇನೆ. ಎಲ್ಲಕ್ಕಿಂತ ಮಿಗಿಲಾಗಿ ಸಂವಿಧಾನ ಉಳಿಸುವುದು ನಮ್ಮ ಗುರಿ ಎಂದು ಹೇಳಿದರು.