ನಾಡನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸುವ ಹೆಬ್ಬಯಕೆಯಿಂದ ಅಧಿಕಾರದ ಗದ್ಧುಗೇರಿರುವ ಸಿಎಂ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೇಸ್ ಸರ್ಕಾರದ ಪಂಚ್ ಗ್ಯಾರೆಂಟಿ (ಉಚಿತ ಭಾಗ್ಯ) ಗಳ ಬಗ್ಗೆ ಹಲವರು ಹೊಗಳುವವರು ಇದ್ದಾರೆ, ಅಂತೆಯೇ ಈ ಪಂಚ್ ಗ್ಯಾರೆಂಟಿ (ಉಚಿತ ಭಾಗ್ಯ) ಗಳನ್ನು ಕೆಲವು ತೆಗಳುವವರು ಇದ್ದಾರೆ.
ಇದೆಲ್ಲಾ ಏನೇ ಇದ್ದರೂ ರಾಜ್ಯ ಕಾಂಗ್ರೇಸ್ ಸರ್ಕಾರದ ಪಂಚ್ ಗ್ಯಾರೆಂಟಿಗಳು ಜನಪ್ರಿಯತೆ ಗಳಿಸಿದ್ದು, ಆದ್ದರಿಂದಲೇ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಗ್ಯಾರಂಟಿ ಯೋಜನೆಗಳನ್ನೇ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ತಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ತಿಳಿಸುತ್ತಾ ತನ್ನ ಗ್ಯಾರಂಟಿ ಯೋಜನೆಗಳ ಬಗ್ಗೆಯೂ ತಿಳಿಸುತ್ತಿದೆ.
ಶಕ್ತಿ ಯೋಜನೆಯು ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ 2023ರ ವಿಧಾನಸಭೆ ಚುನಾವಣೆಯಲ್ಲಿ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಕೂಡ ಒಂದು. ಕಾಂಗ್ರೆಸ್ ಪಕ್ಷವು ನೀಡಿದ್ದ 5 ಗ್ಯಾರಂಟಿಗಳಲ್ಲಿ ಒಂದಾದ ಈ ಶಕ್ತಿ ಯೋಜನೆಯಡಿ ಸರ್ಕಾರಿ ಬಸ್ಗಳಲ್ಲಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸುತ್ತಿದೆ.
ಶಕ್ತಿ ಯೋಜನೆಯು ರಾಜ್ಯದ ಮಹಿಳೆಯರಿಗೆ ಸರ್ಕಾರದ ಸಾಮಾನ್ಯ ಬಸ್ಗಳಲ್ಲಿ ಉಚಿತ ಪ್ರಯಾಣ ಒದಗಿಸುವ ಯೋಜನೆಯಾಗಿದ್ದು, ಈ ಯೋಜನೆ ಈಗಾಗಲೇ ಯಶಸ್ವಿಯಾಗಿದೆ. ರಾಜ್ಯದ ಅಸಂಖ್ಯ ಮಹಿಳೆಯರು ಸರ್ಕಾರದ ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಸರ್ಕಾರದ ಈ ಯೋಜನೆಯನ್ನು ಅನೇಕರು ಶ್ಲಾಘಿಸಿದ್ದು, ಶಕ್ತಿ ಯೋಜನೆಯು ನಾರಿಯರಿಗೆ ಇನ್ನಷ್ಟು ಶಕ್ತಿ ತುಂಬಿದೆ. ಮಹಿಳಾ ಸಬಲೀಕರಣದತ್ತ ಪಯಣ ಎಂದು ಬಣ್ಣಿಸಿದ್ದಾರೆ.
ಇದಕ್ಕೊಂದು ಸಾಕ್ಷಿಯೆಂಬAತೆ ಕಾಂಗ್ರೆಸ್ ಸರ್ಕಾರ ನೀಡಿದ್ದ ಫ್ರೀ ಟಿಕೆಟ್ ಫಲಾನುಭವಿ ಅರಸೀಕೆರೆಯ ಕಾನೂನು ವಿದ್ಯಾರ್ಥಿನಿಯೊಬ್ಬಳು ವಿಶೇಷವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಧನ್ಯವಾದ ತಿಳಿಸಿದ್ದಾಳೆ. ತಾನು ಇಷ್ಟು ದಿನಗಳಿಂದ ಉಚಿತವಾಗಿ ಪ್ರಯಾಣಿಸಿದ ಫ್ರೀ ಬಸ್ ಟಿಕೆಟ್ಗಳನ್ನು ಸಂಗ್ರಹಿಸಿ ಹೂವಿನೊಂದಿಗೆ ಪೋಣಿಸಿ ವಿಶೇಷವಾದ ಹಾರವೊಂದನ್ನು ತಯಾರಿಸಿದ ವಿದ್ಯಾರ್ಥಿನಿ ಅದನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಹಾಕಿದ್ದಾಳೆ. ಇದಲ್ಲದೇ ಫ್ರೀ ಟಿಕೆಟ್ ನನ್ನ ಜೀವನದಲ್ಲಿ ವಿದ್ಯಾಭ್ಯಾಸ ನಿರಾತಂಕವಾಗಿ ಮಾಡಲು ಸಾಧ್ಯವಾಯಿತು ಎಂದು ಸಿಎಂಗೆ ಧನ್ಯವಾದ ತಿಳಿಸಿದ್ದಾಳೆ.
ಲೋಕಸಭೆ ಚುನಾವಣೆ ಪ್ರಚಾರಕ್ಕೆ ಹಾಸನ ಜಿಲ್ಲೆಯ ಅರಸೀಕೆರೆಗೆ ಬಂದಿದ್ದ ಸಿಎಂ ಸಿದ್ದರಾಮಯ್ಯನವರಿಗೆ ವಿದ್ಯಾರ್ಥಿನಿಯೊಬ್ಬಳು ಶಕ್ತಿ ಯೋಜನೆಯಡಿಯ ಉಚಿತ ಬಸ್ ಟಿಕೆಟ್ ಗಳ ಮಾಲೆಯನ್ನು ಹಾಕಿ ಈ ಮೂಲಕ ತನ್ನ ಕೃತಜ್ಞತೆ ಮೆರೆದಿದ್ದಾಳೆ. ಚುನಾವಣಾ ಪ್ರಚಾರದ ಸಂಧರ್ಭದಲ್ಲಿ ಸಿಎಂ ಸಿದ್ದರಾಮಯ್ಯನವರ ಕಡೆಗೆ ಓಡೋಡಿ ಬಂದ ಕಾನೂನು ವಿದ್ಯಾರ್ಥಿನಿ ಎಂ. ಜಯಶ್ರೀ ತಾನು ಉಚಿತವಾಗಿ ಪ್ರಯಾಣಿಸಿದ್ದ ಬಸ್ ಟಿಕೆಟ್ಗಳಲ್ಲಿಯೇ ಮಾಡಿಟ್ಟಿದ್ದ ಮಾಲೆಯನ್ನು ತಂದು ಹಾಕಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಪ್ರಚಾರ ನಡೆಸುತ್ತಿದ್ದ ಸಿಎಂಗೆ ಮಾಲಾರ್ಪಣೆ ಮಾಡಿದ ಜಯಶ್ರೀ ಅವರು, ‘ಕಾಂಗ್ರೆಸ್ ಸರ್ಕಾರದ ಉಚಿತ ಪ್ರಯಾಣ ಯೋಜನೆ-ಶಕ್ತಿ ಯೋಜನೆ- ಮುಖ್ಯಮಂತ್ರಿಯಾಗಿ ನೀವು ಜಾರಿಗೆ ತಂದಿದ್ದರಿAದ ಯಾವುದೇ ಆರ್ಥಿಕ ತೊಂದರೆಯಿಲ್ಲದೆ ಕಾನೂನು ಕೋರ್ಸ್ ಮಾಡಲು ಸಾಧ್ಯವಾಯಿತು. ಆದ್ದರಿಂದ ಟಿಕೇಟ್ ಎಲ್ಲವನ್ನು ಸಂಗ್ರಹಿಸಿ ಹಾರ ತಯಾರಿಸಿ ನಿಮ್ಮ ಭೇಟಿಗಾಗಿ ಕಾಯುತ್ತಿದ್ದೆ” ಎಂದು ಹರ್ಷ ವ್ಯಕ್ತ ಪಡಿಸುತ್ತಾ ಸಿಎಂಗೆ ತಾನು ಉಚಿತವಾಗಿ ಪ್ರಯಾಣಿಸಿದ್ದ ಬಸ್ ಟಿಕೆಟ್ ಹಾರ ಹಾಕಿ ಜಯದ ನಗೆ ಬೀರಿದ್ದಾಳೆ.
ಇದರಿಂದ ಸಂತಸಗೊAಡ ಸಿಎಂ ಸಿದ್ದರಾಮಯ್ಯನವರು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊAಡಿದ್ದಾರೆ. ಇಂದು ನನ್ನ ಕೊರಳಿಗೆ ಹಾಕಿದ ಉಚಿತ ಬಸ್ ಟಿಕೆಟ್ ಗಳ ಮಾಲೆ ಆಕೆ ವ್ಯಕ್ತಪಡಿಸಿದ ಕೃತಜ್ಞತೆಯ ಮಾಲೆಯೂ ಹೌದು, ನಮ್ಮ ಸರ್ಕಾರದ ಸಾಧನೆಯ ಮಾಲೆಯೂ ಹೌದು ಬಹುಶ: ಇದು ಈ ಚುನಾವಣೆಯ ವಿಜಯಮಾಲೆಯೂ ಇರಬಹುದೇನೋ?
‘ನೀವು ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದ್ದರಿಂದ ನಾನು ಕಾನೂನು ವ್ಯಾಸಂಗವನ್ನು ಸುಗಮವಾಗಿ ನಡೆಸುವಂತಾಗಿದೆ. ಎಂದಾದರೂ ನೀವು ಸಿಕ್ಕರೆ ಮಾಲೆ ಮಾಡಿ ಹಾಕಬೇಕೆಂದು ಉಚಿತ ಟಿಕೆಟ್ ಗಳನ್ನು ಸಂಗ್ರಹಿಸಿಟ್ಟಿದೆ. ನೀವು ಇಲ್ಲಿ ಬರುವುದು ಗೊತ್ತಾಗಿ ಅವುಗಳನ್ನು ಮಾಲೆ ಕಟ್ಟಿ ತಂದೆ’’ ಎಂದು ವಿದ್ಯಾರ್ಥಿನಿ ಹೇಳಿದಳು ಎಂದು ಬರೆದುಕೊಂಡಿದ್ದಾರೆ.
ಅಲ್ಲದೇ, ಕಾನೂನು ವ್ಯಾಸಂಗ ಮುಗಿಸಿ ಒಳ್ಳೆಯ ವಕೀಲಳಾಗಿ ಸಮಾಜದ ಸೇವೆ ಮಾಡು, ಗ್ಯಾರಂಟಿ ಯೋಜನೆಗಳಿಂದ ಹೆಣ್ಣುಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಆರೋಪ ಮಾಡುವ ದಾರಿ ತಪ್ಪಿದ ಜನರಿಗೆ ಸರಿಯಾದ ದಾರಿ ತೋರಿಸುವವಳಾಗು’ ಎಂದು ಸಿಎಂ ಸಿದ್ದರಾಮಯ್ಯ ಹಾರೈಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದಲ್ಲಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ವೇಳೆ ಅರಸೀಕೆರೆಯ ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿನಿ ಎಂ.ಎ.ಜಯಶ್ರೀ ಈ ಹಾರವನ್ನು ಹಾಕಿದ್ದಾಳೆ. ಹೀಗೆ ಆಕೆ ವಿನೂತನ ಶೈಲಿಯಲ್ಲಿ ಧನ್ಯತೆ ತೋರಿದ್ದು ಸದ್ಯ ಈ ಫ್ರೀ ಬಸ್ ಟಿಕೆಟ್ ಹಾರ ಹಾಗೂ ವಿಷಯ ಸದ್ಯ ಎಲ್ಲೆಡೆ ವೈರಲ್ ಆಗಿದೆ.
ಶಕ್ತಿ ಯೋಜನೆಯು ಈಗಾಗಲೇ ಯಶಸ್ವಿಯಾಗಿದೆ. ರಾಜ್ಯದ ಅಸಂಖ್ಯ ಮಹಿಳೆಯರು ಸರ್ಕಾರದ ಈ ಯೋಜನೆಯ ಸಂಪೂರ್ಣ ಲಾಭ ಪಡೆಯುತ್ತಿದ್ದಾರೆ. ಶಕ್ತಿ ಯೋಜನೆಯು ನಾರಿಯರಿಗೆ ಇನ್ನಷ್ಟು ಶಕ್ತಿ ತುಂಬಿದೆ. ಇದು ಮಹಿಳಾ ಸಬಲೀಕರಣದತ್ತ ಪಯಣ ಎಂಬುದಕ್ಕೆ ಇದು ಇನ್ನೊಂದು ಸಾಕ್ಷಿಯಾಗಿದೆ. ಅಲ್ಲದೇ ಹೀಗೆ ಈ ಪಯಣ ಹಲವರ ಬದುಕನ್ನೂ ಹಸನಾಗಿಸಿದೆ.
– ಮಂಜುನಾಥ.ಎಸ್. ಕಟ್ಟಿಮನಿ
ಹವ್ಯಾಸಿ ಪತ್ರಕರ್ತ ಹಾಗೂ ಲೇಖಕ
ವಿಜಯಪುರ