ಬೆಂಗಳೂರು,23: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರದ ಅಬ್ಬರ ಜೋರಾಗಿದ್ದು, ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಉದ್ದೇಶದಿಂದ ಏಪ್ರಿಲ್ 26ರಂದು ಮೈಸೂರಿನ ಪ್ರವಾಸಿ ತಾಣಗಳನ್ನು ಬಂದ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.
ಏಪ್ರಿಲ್ 26ರಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರ ವ್ಯಾಪ್ತಿಯ ಮೈಸೂರು ಮೃಗಾಲಯ, ಕಾರಂಜಿ ಕೆರೆ ಸೇರಿದಂತೆ ಇತರ ಪ್ರವಾಸಿ ತಾಣಗಳನ್ನು ಮುಚ್ಚಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಏಪ್ರಿಲ್ 26 ರಂದು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತದಾನದ ದಿನ ಶುಕ್ರವಾರ ಬಂದ ಹಿನ್ನೆಲೆಯಲ್ಲಿ ಅನೇಕರು ವಾರಾಂತ್ಯಕ್ಕೆ ಮೈಸೂರಿಗೆ ಪ್ರವಾಸಕ್ಕೆ ಪ್ಲಾನ್ ರಚಿಸಲಿದ್ದಾರೆ. ಶನಿವಾರ, ಭಾನುವಾರ ರಜೆ ಇರುವ ಕಾರಣ ಮತದಾನ ಮಾಡದೇ ಪ್ರವಾಸಕ್ಕೆ ತೆರಳುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಹೀಗಾಗಿ ಮತದಾನದ ಪ್ರಮಾಣ ಹೆಚ್ಚಿಸುವ ಸಲುವಾಗಿ ಅಧಿಕಾರಿಗಳು ಪ್ರವಾಸಿ ತಾಣಗಳನ್ನು ಬಂದ್ ಮಾಡಲು ಮುಂದಾಗಿದ್ದಾರೆ.
ಚುವಾವಣಾಧಿಕಾರಿಗಳ ಈ ಕ್ರಮಕ್ಕೆ ಆತಿಥ್ಯ ಕ್ಷೇತ್ರ ಕೂಡ ಕೈಜೋಡಿಸಿದ್ದು, ಮಕತ ಹಕ್ಕು ಚಲಾಯಿಸಿ ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳಿಗೆ ಬರುವ ಮತದಾರರಿಗೆ ರಿಯಾಯಿತಿ ಹಾಗೂ ವಿಶೇಷ ಪ್ಯಾಕೇಜ್ ನೀಡಲು ಮುಂದಾಗಿದೆ.
ವಿಶ್ವೇಶ್ವರನಗರದ ನಿವಾಸಿ ರಂಗನಾಥ್ ಮಾತನಾಡಿ, ಮತದಾರರ ಓಲೈಕೆಗೆ ಅಧಿಕಾರಿಗಳು ಮತ್ತು ವ್ಯಾಪಾರಸ್ಥರು ಒಗ್ಗೂಡುತ್ತಿರುವುದು ಸಂತಸ ತಂದಿದೆ. ಪ್ರವಾಸಿ ತಾಣಗಳನ್ನು ಮುಚ್ಚುವುದು ಮತ್ತು ರಿಯಾಯಿತಿಗಳನ್ನು ನೀಡುವುದು ಮತದಾನವನ್ನು ಹೆಚ್ಚಿಸಲು ಸಹಾಯ ಮಾಡುವುದಲ್ಲದೆ, ನಮ್ಮ ನಗರದ ಭವಿಷ್ಯವನ್ನು ರೂಪಿಸುವಲ್ಲಿ ನಮ್ಮ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ.
ಅಧಿಕಾರಿಯೊಬ್ಬರು ಮಾತನಾಡಿ, ಹೆಚ್ಚಿನ ಮತದಾನ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಖಚಿತಪಡಿಸುವುದು ನಮ್ಮ ಗುರಿಯಾಗಿದೆ. ಮತದಾನದ ಪ್ರಮಾಣವನ್ನು ಹೆಚ್ಚಿಸುವ ಸಂಭಾವ್ಯ ಮಾರ್ಗಗಳ ಕುರಿತು ಎಲ್ಲಾ ಪಾಲುದಾರರೊಂದಿಗೆ ಚರ್ಚೆ ನಡೆಸುತ್ತಿದ್ದೇವೆ. ಪ್ರವಾಸಿ ತಾಣಗಳನ್ನು ಮುಚ್ಚುವ ಮೂಲಕ, ಪ್ರತಿಯೊಬ್ಬ ನಾಗರಿಕರು ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸಲು ಅಧಿಕಾರ ಹೊಂದುವ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದೇವೆಂದು ಹೇಳಿದ್ದಾರೆ.