ಶಿವಮೊಗ್ಗ,23: ಉಚ್ಚಾಟನೆಗೆ ಹೆದರುವುದಿಲ್ಲ. ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿ ಗೆಲುವು ಸಾಧಿಸಿ ಬಿಜೆಪಿಗೆ ರಳಿ ಹೋಗುತ್ತೇನೆಂದು ಕೆ.ಎಸ್.ಈಶ್ವರಪ್ಪ ಅವರು ಸೋಮವಾರ ಹೇಳಿದರು.
ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ವಿರುದ್ಧ ಬಂಡಾಯವೆದ್ದು, ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದಿಂದ ಸ್ಪರ್ಧೆ ಮಾಡುತ್ತಿರುವ ಕೆಎಸ್ ಈಶ್ವರಪ್ಪಗೆ ಬಿಜೆಪಿ ಶಾಕ್ ನೀಡಿದ್ದು, 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆಗೊಳಿಸಿದೆ.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಈಶ್ವರಪ್ಪ ಅವರು, ಉಚ್ಚಾಟನೆ ಬಗ್ಗೆ ನನಗೆ ಯಾವುದೇ ಪತ್ರ ಬಂದಿಲ್ಲ. ನಾನು ಯಾವ ಉಚ್ಛಾಟನೆಗೆ ಹೆದರುವುದಿಲ್ಲ. ಈ ಬಾರಿ ಲೋಕಸಭೆ ಚುನಾವಣೆ ಸ್ಪರ್ಧೆ ಮಾಡಿ ಗೆಲ್ಲುತ್ತೇನೆ, ಮತ್ತೆ ವಾಪಸ್ ಬಿಜೆಪಿಗೆ ಹೋಗುತ್ತೇನೆ ಎಂದು ಹೇಳಿದರು.
ನಾನು ಪಕ್ಷೇತರ ಅಭ್ಯರ್ಥಿ ಆಗಿ ಕಣಕ್ಕೆ ನಿರ್ಧಾರ ಮಾಡಿದ್ದೇನೆ. ಅಂದಿನಿಂದ ಇಂದಿನವರೆಗೆ ನಾನು ಅದನ್ನೇ ಹೇಳಿದ್ದೇನೆ. ನನ್ನ ಸ್ಪರ್ಧೆ ಬಗ್ಗೆ ಬಿಎಸ್ವೈ ಕುಟುಂಬ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದರು. ಮೋದಿ ಕಾರ್ಯಕ್ರಮಕ್ಕೆ ಈಶ್ವರಪ್ಪ ಬರುತ್ತಾರೆ ಎಂದರು, ಬಳಿಕ ನಾಮಪತ್ರ ಹಾಕುವುದಿಲ್ಲ ಎಂದಿದ್ದರು, 19ನೇ ತಾರೀಖು ಅವರಿಗೆ ಶಾಕ್ ನೀಡಿತ್ತು.
ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದು ಶತಃಸಿದ್ಧ. ಗೆಲ್ಲುವುದು ನಿಶ್ಚಿತ ಎಂದು ಹೇಳಿದ್ದೆನು. ಅದರಂತೆ ನಾಮಪತ್ರ ಹಿಂತೆಗೆದುಕೊಳ್ಳದೇ ಕಣದಲ್ಲಿಯೇ ಉಳಿದಿದ್ದೇನೆ. ನಾಳೆಯಿಂದ ಇನ್ನಷ್ಟು ಬಿರುಸಾಗಿ ಚುನಾವಣೆ ಪ್ರಚಾರದಲ್ಲಿ ತೊಡಗಿಕೊಳ್ಳುವೆ ಎಂದು ತಿಳಿಸಿದರು