ಧಾರವಾಡ, ಏಪ್ರಿಲ್ 22: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಪಕ್ಷೇತರ ಅಭ್ಯರ್ಥಿ ದಿಂಗಾಲೇಶ್ವರ ಸ್ವಾಮೀಜಿ ತಮ್ಮ ನಾಮಪತ್ರ ಹಿಂಪಡೆಯಲು ನಿರ್ಧರಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಧಾರವಾಡ ಲೋಕಸಭಾ ಕ್ಷೇತ್ರದಿಂದ ಪ್ರಹ್ಲಾದ್ ಜೋಶಿಗೆ ಬಿಜೆಪಿ ಟಿಕೆಟ್ ವಿರೋಧಿಸಿ ದಿಂಗಾಲೇಶ್ವರ ಸ್ವಾಮೀಜಿಗಳು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು, ನಾಮಪತ್ರ ಸಲ್ಲಿಸಿದ್ದರು. ಆದರೆ ಈಗ ನಾಮಪತ್ರ ಹಿಂಪಡೆಯಲು ನಿರ್ಧರಿಸಿದ್ದಾರೆ. ಇತ್ತ ಕಾಂಗ್ರೆಸ್ ನಿಂದ ವಿನೋದ್ ಅವರು ಸ್ಪರ್ಧೆ ನಡೆಸಿದ್ದು,ಧಾರವಾಡ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಹಾಗೂ ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಇನ್ನೂ ಚುನಾವಣಾ ಪ್ರಚಾರದ ನಡೆಸಿದ್ದ ದಿಂಗಾಲೇಶ್ವರ ಸ್ವಾಮೀಜಿಗಳು ಪ್ರಧಾನಿಯೇ ಬಂದು ಹೇಳಿದರೂ ನಾಮಪತ್ರ ಹಿಂಪಡೆಯಲ್ಲ ಎಂದು ಹೇಳಿದ್ದ ಸ್ವಾಮೀಜಿ ಈಗ ಮನಸ್ಸು ಬದಲಿಸಿದ್ದು, ಸ್ವಾಮೀಜಿ ಮನವೊಲಿಸಿದ್ದು ಬಿಜೆಪಿನಾ? ಕಾಂಗ್ರೆಸ್ಸಾ? ಎಂಬ ಪ್ರಶ್ನೆ ಮೂಡಿದೆ
ಶಿರಹಟ್ಟಿ ಮಠದ ಹಿರಿಯ ಪೀಠಾಧಿಪತಿ ಫಕ್ಕೀರ ಶಿವಯೋಗಿ ಸಿದ್ದರಾಮ ಶ್ರೀಗಳ ಸೂಚನೆ ಮೇರೆಗೆ ಪಕ್ಷೇತರ ಅಭ್ಯರ್ಥಿ ದಿಂಗಾಲೇಶ್ವರ ಸ್ವಾಮೀಜಿ ತಮ್ಮ ನಾಮಪತ್ರ ಹಿಂಪಡೆಯಲು ನಿರ್ಧರಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ನಾಮಪತ್ರ ಹಿಂಪಡೆಯಲು ನಿರ್ಧರಿಸಿದ ದಿಂಗಾಲೇಶ್ವರ ಸ್ವಾಮೀಜಿ ಸಮುದಾಯದವರ ಮಾತಿಗೆ ಕಟಿಬಿದ್ದು ದಿಂಗಾಲೇಶ್ವರ ಸ್ವಾಮೀಜಿ ಭಕ್ತರ ಆಶಯದಂತೆ ನಾಮಪತ್ರವನ್ನು ಹಿಂಪಡೆಯುವುದಾಗಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.
ಇನ್ನೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರೆ ಸಮುದಾಯದ ಜೊತೆಗೆ ಭಕ್ತರ ವಿರೋಧವನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಬಿಜೆಪಿಯ ಪ್ರಭಾವಿ ನಾಯಕರೊಬ್ಬರು ದೂರವಾಣಿಯಲ್ಲಿ ಸಂಪರ್ಕಿಸಿ ನಾಮಪತ್ರ ಹಿಂಪಡೆಯುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ದಿಂಗಾಲೇಶ್ವರ ಸ್ವಾಮೀಜಿಗಳು ಮಾತನಾಡಿ, ನನಗೆ ಈಗಲೂ ಧಾರವಾಡ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಷಿ ಮೇಲೆ ಇರುವ ಅಸಮಾಧಾನ ಸ್ವಲ್ಪವೂ ಕಡಿಮೆಯಾಗಿಲ್ಲ. ಆದರೆ ನೀವು ಮತ್ತು ನಿಮ್ಮ ಕುಟುಂಬದವರು ಮಠದ ಬಗ್ಗೆ ಇಟ್ಟುಕೊಂಡಿರುವ ಗೌರವದಿಂದ ನಿಮ್ಮ ಮಾತಿಗೆ ಬೆಲೆ ಕೊಟ್ಟು ನಾಮಪತ್ರ ಹಿಂಪಡೆಯುತ್ತಿದ್ದೇನೆ.
ಮುಂದಿನ ದಿನಗಳಲ್ಲಾದರೂ ಪ್ರಹ್ಲಾದ್ ಜೋಷಿಗೆ ನಮ್ಮ ಸಮುದಾಯದ ವಿರುದ್ಧ ಷಡ್ಯಂತ್ರ್ಯ ನಡೆಸುವುದು ಇಲ್ಲವೇ ಎರಡು ಮತ್ತು ಮೂರನೇ ಹಂತದ ನಾಯಕರನ್ನು ತುಳಿಯುವ ಪ್ರವೃತ್ತಿ ಬಿಡುವಂತೆ ಸೂಚನೆ ನೀಡಿ ಎಂದು ಸ್ವಾಮೀಜಿ ಹೇಳಿದ್ದಾರೆ.